ನವದೆಹಲಿ: ಹೆಣ್ಣು ಹೆತ್ತಿದ್ದಕ್ಕೆ ಮಹಿಳೆ ಹೊಣೆಯಲ್ಲ ಎಂದು ಪ್ರಕರಣವೊಂದರ ತನಿಖೆ ವೇಳೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. “ಭ್ರೂಣವು ಗಂಡೋ, ಹೆಣ್ಣೋ ಎಂಬುದನ್ನು ತೀರ್ಮಾನಿಸುವುದು ಪುರುಷನ ವರ್ಣತಂತುಗಳೇ ವಿನಾ ಮಹಿಳೆಗೂ ಅದಕ್ಕೂ ಸಂಬಂಧ ಇಲ್ಲ ಎಂಬುದನ್ನು ಅತ್ತೆ-ಮಾವಂದಿರಿಗೆ ತಿಳಿಹೇಳಬೇಕು” ಎಂದು ದೆಹಲಿ ಹೈಕೋರ್ಟ್ ಹೇಳಿದೆ. ವಂಶೋದ್ಧಾರಕನನ್ನು ಕೊಡಲಿಲ್ಲ ಎಂದು ಸೊಸೆಯಂದಿರಿಗೆ ಕಿರುಕುಳ ನೀಡುವವರಿಗೆ ಈ ವಿಚಾರವನ್ನು ತಿಳಿಸಬೇಕು ಎಂದು ಕಿವಿಮಾತು ಹೇಳಿದೆ.
ಮಹಿಳೆಯೊಬ್ಬಳು ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು. ಈ ಮಹಿಳೆ ಕಡಿಮೆ ವರದಕ್ಷಿಣೆ ತಂದಿದ್ದಕ್ಕಾಗಿ ಮಾತ್ರವಲ್ಲದೆ ಇಬ್ಬರು ಹೆಣ್ಣುಮಕ್ಕಳನ್ನು ಹೆತ್ತಿದ್ದಕ್ಕಾಗಿ ಅತ್ತೆ-ಮಾವನಿಂದ ಕಿರುಕುಳ ಅನುಭವಿಸಿದ್ದರು.
ಮದುವೆಯಾಗಿ ತಂದೆಯ ಮನೆ ತೊರೆದ ನಂತರದಲ್ಲಿ ಮಗಳು ಚೆನ್ನಾಗಿರಲಿ ಎಂದು ತಂದೆ-ತಾಯಿ ಬಯಸುತ್ತಾರೆ. ಆದರೆ, ಆ ಹೆಣ್ಣಿಗೆ ಪ್ರೀತಿ ಮತ್ತು ಬೆಂಬಲ ನೀಡುವ ಬದಲು ಆಕೆಯು ಅತ್ತೆ-ಮಾವ, ನಾದಿನಿ, ಮೈದುನರಿಂದ ಕಿರುಕುಳ ಅನುಭವಿಸಬೇಕಾಗುತ್ತದೆ. ಇದು ಮನಕಲಕುವ ಸಂಗತಿ ಎಂದು ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮ ಅವರು ಹೇಳಿದ್ದಾರೆ.
ವಿಜ್ಞಾನದ ಪ್ರಕಾರ, ಅಂಡಾಣು ಯಾವ ವರ್ಣತಂತು ಇರುವ ವೀರ್ಯಾಣುವಿನ ಜೊತೆ ಸೇರುತ್ತದೆ ಎಂಬುದು ಭ್ರೂಣದ ಲಿಂಗವನ್ನು ತೀರ್ಮಾನಿಸುತ್ತದೆ’ ಎಂದು ಹೇಳಿದೆ.
ಹೆಣ್ಣು ಮಗಳಿಗೆ ಜನ್ಮ ನೀಡಿದ್ದಕ್ಕಾಗಿ ಕಿರುಕುಳ ಅನುಭವಿಸಿದ ಹತ್ತು ಹಲವು ಪ್ರಕರಣಗಳನ್ನು ಕೋರ್ಟ್ ನೋಡಿದೆ. ವಂಶೋದ್ಧಾರಕನನ್ನು ನೀಡಲಿಲ್ಲ ಎಂದು ಮಹಿಳೆಯರು ತಮ್ಮ ಗಂಡನ ಮನೆಯವರಿಂದ ನಿರಂತರವಾಗಿ ಕಿರುಕುಳ ಅನುಭವಿಸಿದ್ದನ್ನು ಕಂಡಿದೆ ಎಂದು ನ್ಯಾಯಮೂರ್ತಿ ಶರ್ಮ ಹೇಳಿದ್ದಾರೆ.
ಇಂತಹ ಜನರಿಗೆ ಅರಿವು ನೀಡುವ ಅಗತ್ಯ ಇದೆ. ಭ್ರೂಣದ ಲಿಂಗ ಯಾವುದು ಎಂಬುದನ್ನು ತೀರ್ಮಾನಿಸುವುದು ತಮ್ಮ ಮಗನೇ ವಿನಾ ಸೊಸೆ ಅಲ್ಲ ಎಂಬುದನ್ನು ಇಂತಹ ಅತ್ತೆ-ಮಾವಂದಿರಿಗೆ ತಿಳಿಹೇಳಬೇಕಿದೆ ಎಂದು ಶರ್ಮ ಅವರು ಹೇಳಿದ್ದಾರೆ