ಹೇಮಗಿರಿ ಕ್ಷೇತ್ರದಲ್ಲಿ ಸಡಗರ ಸಂಭ್ರಮದ ತೆಪ್ಪೋತ್ಸವ – News Kannada (ನ್ಯೂಸ್ ಕನ್ನಡ)

ಕೆ.ಆರ್.ಪೇಟೆ: ತಾಲೂಕಿನ ಹೇಮಗಿರಿ ಕ್ಷೇತ್ರದಲ್ಲಿ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿಯವರ ತೆಪ್ಪೋತ್ಸವವು  ಹೇಮಾವತಿ ನದಿಯಲ್ಲಿ ಸಡಗರ ಸಂಭ್ರಮದಿಂದ  ನಡೆಯಿತು.

ಸುಂದರ ತೆಪ್ಪದಲ್ಲಿ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ  ಬಣ್ಣ ಬಣ್ಣದ ವಿದ್ಯುತ್ ದೀಪಗಳು ಹಾಗೂ ಹೂವುಗಳಿಂದ ಅಲಂಕರಿಸಲಾಗಿತ್ತು.  ಶಾಸಕ ಹೆಚ್.ಟಿ.ಮಂಜು ಹಾಗೂ ತಹಶೀಲ್ದಾರ್ ನಿಸರ್ಗ ಪ್ರಿಯ ಅವರು ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿಯವರ ಉತ್ಸವ ಮೂರ್ತಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಹೇಮಗಿರಿ ಜಾತ್ರೆ ಮತ್ತು ಕಲ್ಯಾಣ  ವೆಂಕಟರಮಣಸ್ವಾಮಿಯ ರಥೋತ್ಸವ ಹಾಗೂ ತೆಪ್ಪೋತ್ಸವಗಳು ನಾಡಿನಲ್ಲಿಯೇ ಸುಪ್ರಸಿದ್ದವಾಗಿದೆ. ಮೈಸೂರು ಮಹಾರಾಜರ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ರಥೋತ್ಸವ ಮತ್ತು ತೆಪ್ಪೋತ್ಸವ ಜನರ ಧಾರ್ಮಿಕ ಮತ್ತು ಪರಂಪರೆಯನ್ನು ಬಿಂಬಿಸುತ್ತಿದೆ. ರಾಜ್ಯದಲ್ಲಿಯೇ ಆಚರಿಸಲ್ಪಡುವ ಅಪರೂಪದ ತೆಪ್ಪೋತ್ಸವ ಇದಾಗಿದ್ದು ಹತ್ತು ದಿನಗಳ ಕಾಲ ನಡೆಯುವ ಪ್ರಸಿದ್ದ ದನಗಳ ಜಾತ್ರೆ ಹಾಗೂ ಶ್ರೀ ಕಲ್ಯಾಣವೆಂಕಟರಮಣ ಸ್ವಾಮಿಯ ಬ್ರಹ್ಮರಥೋತ್ಸವ ಮತ್ತು ತೆಪ್ಪೋತ್ಸವ ಸಂಪ್ರದಾಯದಂತೆ ಸಡಗರ ಸಂಭ್ರಮದಿಂದ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ.

ಭಕ್ತರು ತೆಪ್ಪೋತ್ಸವ ವೀಕ್ಷಿಸಲು ಇಲ್ಲಿಗೆ ವಿವಿಧ ತಾಲ್ಲೂಕು, ಜಿಲ್ಲೆಗಳಿಂದ ಆಗಮಿಸುತ್ತಾರೆ. ತಾಲ್ಲೂಕು ಆಡಳಿತ  ಮತ್ತು ಬಂಡಿಹೊಳೆ ಗ್ರಾಮ ಪಂಚಾಯಿತಿ ಉತ್ತಮವಾಗಿ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿಗೆ ಆಗಮಿಸಿರುವ ಭಕ್ತರಿಗೆ ದೇವರ ಕೃಪೆ ಸಿಗಲಿ, ಕಾಲಕಾಲಕ್ಕೆ ಮಳೆ, ಬೆಳೆ ಆಗಲಿ, ರೋಗರುಜಿನಗಳು ದೂರವಾಗಿ ಜನರು ಸಂಕಷ್ಟದಿಂದ ಪಾರಾಗಿ ಉತ್ತಮ ಜೀವನ ನಡೆಸಲು ಶ್ರೀ ವೆಂಕಟರಮಣಸ್ವಾಮಿ ಅನುಗ್ರಹಿಸಲಿ ಎಂದರು.

ಕಳೆದ ಹದಿನೈದು ದಿನಗಳಿಂದ ಜಾತ್ರೆಗಾಗಿ ಶ್ರಮಿಸಿದ್ದ ತಾಲ್ಲೂಕು ಹಂತದ ಅಧಿಕಾರಿಗಳನ್ನು ತಾಲ್ಲೂಕು ಆಡಳಿತದ  ವತಿಯಿಂದ ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.

Font Awesome Icons

Leave a Reply

Your email address will not be published. Required fields are marked *