ಬೆಂಗಳೂರು: 2024-25ನೇ ಸಾಲಿನ ಬಿಎಸ್‌ಸಿ ನರ್ಸಿಂಗ್ ಕೋರ್ಸ್‌ಗೆ ಕೆಇಎಯಿಂದ ಆಯ್ಕೆಯಾದ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ಪಡೆದ ಆರೋಪದಡಿ 2 ಕಾಲೇಜುಗಳ ಸಂಯೋಜನೆ ರದ್ದುಪಡಿಸಿ ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ (ಆರ್‌ಜಿಯುಎಚ್‌ಎಸ್) ಕುಲಸಚಿವರಿಗೆ (ಆಡಳಿತ) ಸೂಚಿಸಿದೆ.
ಮಂಡ್ಯದ ನ್ಯೂ ನವೋದಯ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಹಾಗೂ ಆನೇಕಲ್ ತಾಲೂಕಿನ ಆಕ್ಸ್‌ಫರ್ಡ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಕಾಲೇಜುಗಳು ಸರಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕಕ್ಕೆ ಬೇಡಿಕೆಯಿಟ್ಟಿರುವ ಆರೋಪಗಳು ಕೇಳಿ ಬಂದಿವೆ. 2024-25ನೇ ಸಾಲಿಗೆ ಕೆಇಎ ವತಿಯಿಂದ ಆಯ್ಕೆಯಾಗಿ ಬಿಎಸ್‌ಸಿ ನರ್ಸಿಂಗ್ ಸೀಟು ಪಡೆದು ಮೇಲಿನ 2 ಕಾಲೇಜುಗಳಿಗೆ ದಾಖಲಾತಿಗೆ ಹೋದ ವಿದ್ಯಾರ್ಥಿಗಳಿಂದ ಸರ್ಕಾರ ನಿಗದಿಪಡಿಸಿರುವ ಶುಲ್ಕಕ್ಕಿಂತ ಅತೀ ಹೆಚ್ಚು ಶುಲ್ಕಕ್ಕೆ ಬೇಡಿಕೆ ಇಡಲಾಗಿತ್ತು. ಇದನ್ನು ಆಕ್ಷೇಪಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ್ದರು.ನೊಂದ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದರು. ರದ್ದುಪಡಿಸಿದ ಆದೇಶವನ್ನು ಕೆಇಎ ಅವರಿಗೆ ಕಳುಹಿಸಿ ಯಾವ ವಿದ್ಯಾರ್ಥಿಗಳು ಈ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳದಂತೆ ಸೂಚಿಸಲು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಸೂಚಿಸಿದೆ.
ಯಾವುದೇ ಕೋಟಾದಲ್ಲೂ ಪ್ರವೇಶ ನೀಡದಂತೆ ಸೂಚನೆ
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಸೂಚನೆ ಮೇರೆಗೆ ಈ ಎರಡೂ ಕಾಲೇಗಳ ಪ್ರಾಂಶುಪಾಲರಿಗೆ ಆರ್‌ಜಿಯುಎಚ್‌ಎಸ್ ಪತ್ರ ಬರೆದಿದೆ. 2024-25 ಸಾಲಿನ ಶೈಕ್ಷಣಿಕ ವರ್ಷದ ಮುಂದುವರಿಕೆಯ ಸಂಯೋಜನೆಯನ್ನು ಪರಿಗಣಿಸಲಾಗುವುದಿಲ್ಲ. ಈಸಾಲಿಗೆ ಬಿಎಸ್‌ಸಿ ನರ್ಸಿಂಗ್ ಹಾಗೂ ಪಿ.ಬಿ. ಬಿಎಸ್‌ಸಿ ನರ್ಸಿಂಗ್ ಕೋರ್ಸ್‌ಗೆ ಯಾವುದೇ ಕೋಟಾದಲ್ಲಿ ಪ್ರವೇಶ ನೀಡಬಾರದೆಂದು ಉಲ್ಲೇಖೀಸಲಾಗಿದೆ.