ರಾಂಚಿ: ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ತೊಡೆಸಂಧು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ 2ನೇ ಮತ್ತು 3ನೇ ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದರು.
ಆದ್ರೆ ಈಗ ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯದಿಂದಲೂ ಕೆಎಲ್ ರಾಹುಲ್ ಹೊರಗುಳಿದಿದ್ದಾರೆ.
ಕೆಎಲ್ ರಾಹುಲ್ ರಾಂಚಿ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೀಗ ಅವರು ಸಂಪೂರ್ಣ ಫಿಟ್ ಆಗಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಎನ್ಸಿಎನಲ್ಲಿರುವ ರಾಹುಲ್ ಶೇ.90 ರಷ್ಟು ಫಿಟ್ನೆಸ್ ಸಾಧಿಸಿದ್ದಾರೆ. ಸಂಪೂರ್ಣ ಫಿಟ್ನೆಸ್ ಹೊಂದದೇ ಕಣಕ್ಕಿಳಿದು ರಿಸ್ಕ್ ತೆಗೆದುಕೊಳ್ಳದಿರಲು ಅವರು ನಿರ್ಧರಿಸಿದ್ದಾರೆ. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿದಿದ್ದಾರೆ.
ಹೀಗಾಗಿ ಮಾರ್ಚ್ 7 ರಿಂದ ಶುರುವಾಗುವ ಅಂತಿಮ ಪಂದ್ಯದ ವೇಳೆ ಅವರು ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.
ನಾಲ್ಕನೇ ಟೆಸ್ಟ್ ಪಂದ್ಯದಿಂದ ಕೆಎಲ್ ರಾಹುಲ್ ಹೊರಗುಳಿಯುತ್ತಿರುವ ಕಾರಣ ಕರ್ನಾಟಕದ ಮತ್ತೋರ್ವ ಆಟಗಾರ ದೇವದತ್ ಪಡಿಕ್ಕಲ್ ಟೀಮ್ ಇಂಡಿಯಾದಲ್ಲೇ ಉಳಿಯಲಿದ್ದಾರೆ. ಅಂದರೆ 3ನೇ ಟೆಸ್ಟ್ಗೆ ಕೆಎಲ್ಆರ್ ಅಲಭ್ಯರಾಗಿದ್ದ ಕಾರಣ ಬದಲಿ ಆಟಗಾರನಾಗಿ ಪಡಿಕ್ಕಲ್ ಆಯ್ಕೆಯಾಗಿದ್ದರು.
ಇದೀಗ ನಾಲ್ಕನೇ ಪಂದ್ಯದಿಂದಲೂ ಕೆಎಲ್ ರಾಹುಲ್ ಹಿಂದೆ ಸರಿದಿರುವ ಕಾರಣ ದೇವದತ್ ಪಡಿಕ್ಕಲ್ಗೆ ಚೊಚ್ಚಲ ಪಂದ್ಯವಾಡುವ ಅವಕಾಶ ಸಿಗುವ ಸಾಧ್ಯತೆಯಿದೆ. ಏಕೆಂದರೆ ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ರಜತ್ ಪಾಟಿದಾರ್ ಸಂಪೂರ್ಣ ವಿಫಲರಾಗಿದ್ದಾರೆ.
ಹೀಗಾಗಿ ನಾಲ್ಕನೇ ಪಂದ್ಯದಿಂದ ರಜತ್ ಪಾಟಿದಾರ್ ಅವರನ್ನು ಕೈ ಬಿಡುವ ಸಾಧ್ಯತೆಯಿದ್ದು, ಅವರ ಸ್ಥಾನದಲ್ಲಿ ದೇವದತ್ ಪಡಿಕ್ಕಲ್ಗೆ ಚೊಚ್ಚಲ ಅವಕಾಶ ಸಿಗುವ ನಿರೀಕ್ಷೆಯಿದೆ.