ಉಡುಪಿ: ಫ್ರಾನ್ಸ್ನ ಯುರೆಕ್ಸ್ ಪೋಲಿಯಾನ್ನಲ್ಲಿ ಸೆ.10ರಿಂದ 15ರವರೆಗೆ ನಡೆದ 47ನೇ ವಿಶ್ವ ಕೌಶಲ್ಯ ಸ್ಪರ್ಧೆಯ ಅಡುಗೆ ವಿಭಾಗದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ ಮಣಿಪಾಲ ವ್ಯಾಗ್ಶದ ಬಿಎ ಪಾಕಶಾಲೆಯ ವಿದ್ಯಾರ್ಥಿ ಹರ್ಷವರ್ಧನ್ ಅವರು ಮೆಡಾಲಿಯನ್ ಆಫ್ ಎಕ್ಸ್ಲೆನ್ಸ್ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಈ ಕುರಿತು ಮಣಿಪಾಲದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವ್ಯಾಗ್ಶದ ಪ್ರಾಂಶುಪಾಲ ಡಾ.ಕೆ.ತಿರು ಜ್ಞಾನ ಸಂಬಂಧಮ್ ಅವರು, ಈ ಸ್ಪರ್ಧೆಯಲ್ಲಿ 70ಕ್ಕೂ ಹೆಚ್ಚು ದೇಶಗಳಿಂದ 1400 ಸ್ಪರ್ಧಿಗಳು ಭಾಗವಹಿಸಿದ್ದು, ಭಾರತವು 60 ಸ್ಪರ್ಧಿಗಳೊಂದಿಗೆ 52 ಕೌಶಲ್ಯಗಳಲ್ಲಿ ಸ್ಪರ್ಧಿಸಿತ್ತು. ಭಾರತ ತಂಡವು 3 ಕಂಚಿನ ಪದಕಗಳು ಮತ್ತು 12 ಮೆಡಾಲಿಯನ್ಗಳ ಪಡೆಯುವ ಮೂಲಕ ಸಾಧನೆ ಮಾಡಿದೆ ಎಂದರು.
ಅಡುಗೆ ವಿಭಾಗದಲ್ಲಿ ಮಂಗಳೂರು ಮೂಲದ ಹರ್ಷವರ್ಧನ್ ಭಾರತವನ್ನು ಪ್ರತಿನಿಧಿಸಿದ್ದು, ಈ ವಿಭಾಗದಲ್ಲಿ 43 ದೇಶ ಗಳ ತಲಾ ಒಬ್ಬರಂತೆ 43 ಸ್ಪರ್ಧಿಗಳು ಭಾಗವಹಿಸಿದ್ದರು. ಹರ್ಷವರ್ಧನ್ ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಮೂಲಕ ಭಾರತವು ಮೊದಲ ಬಾರಿಗೆ ಅಡುಗೆ ಕೌಶಲ್ಯದಲ್ಲಿ ಈ ಗೌರವವನ್ನು ಪಡೆದಿದೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿ ಹರ್ಷವರ್ಧನ್ ಮಾತನಾಡಿ, ಈ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡುವುದು ಬಹಳ ದೊಡ್ಡ ಸವಾಲಿನ ಕೆಲಸ ಆಗಿತ್ತು. ಅದಕ್ಕಾಗಿ ನನ್ನ ತರಬೇತುದಾರರಾದ ಕೆ.ತಿರು ಅವರು ಸಾಕಷ್ಟು ಮಾರ್ಗದರ್ಶನ ಮಾಡಿದ್ದರು. ಅದೇ ರೀತಿ ಕಾಲೇಜಿನ ಇತರ ಬಾಣಸಿಗರು ಕೂಡ ನನಗೆ ತುಂಬಾ ಸಹಕಾರ ನೀಡಿದ್ದಾರೆ ಎಂದು ಹೇಳಿದರು.