6 ಮಂದಿಗೆ 20 ವರ್ಷ ಕಠಿಣ ಶಿಕ್ಷೆ – ನ್ಯೂಸ್ ಕರ್ನಾಟಕ ಕನ್ನಡ (News Karnataka Kannada)

ಬೆಳಗಾವಿ: ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುತ್ತೇನೆ ಎಂದು ಪುಸಲಾಯಿಸಿ ಅತ್ಯಾಚಾರ ಎಸಗಿದ ಹಾಗೂ ಪ್ರಚೋದನೆ ನೀಡಿದ 6 ಮಂದಿ ದೋಷಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ ತಲಾ 10 ಸಾವಿರ ದಂಡ ವಿಧಿಸಿ ಜಿಲ್ಲಾ ಪೋಕ್ಸೊ ನ್ಯಾಯಾಲಯ ಗುರುವಾರ ಮಹತ್ವದ ತೀರ್ಪು ನೀಡಿದೆ.

ರಾಯಬಾಗ ತಾಲ್ಲೂಕಿನ ನಸಲಾಪುರದ ಸಚಿನ್ ಬಾಬಾಸಾಹೇಬ ರಾಯಮಾನೆ, ರೂಪಾ ಬಾಬಾಸಾಹೇಬ ಮಾನೆ, ರಾಕೇಸ್ ಬಾಬಾಸಾಹೇಬ ರಾಯಮಾನೆ, ಚಿಕ್ಕೋಡಿ ತಾಲ್ಲೂಕಿನ ಗಳತಗಾದ ರೋಹಿಣಿ ಶ್ರೀಮಂತ ದೀಕ್ಷಿತ್, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲ್ಲೂಕಿನ ಕುಪ್ಪವಾಡದ ವಿನೋದ್ ಸುರೇಶ್ ರಾಯಮಾನೆ, ವಿಜಯ ತಾನಾಜಿ ಸಾಳುಂಕೆ ಶಿಕ್ಷೆಗೆ ಗುರಿಯಾದವರು.

2015 ಜೂ.21ರಂದು ಆರೋಪಿ ಸಚಿನ್ ರಾಯಮಾನೆ ಬಾಲಕಿಯನ್ನು ಮದುವೆ ಆಗುತ್ತೇನೆ ಎಂದು ನಂಬಿಸಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಗಗನಬಾವಡಾ ತಾಲ್ಲೂಕಿನ ನಿಗದಿವಾಡಿ ಗ್ರಾಮದ ಬಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಶೆಡ್‌ನಲ್ಲಿ ಬಾಲಕಿ ಮೇಲೆ ಆರೋಪಿ ಸಚಿನ್ ಅತ್ಯಾಚಾರ ಎಸಗಿದ್ದನು. ಇನ್ನುಳಿದವರು ಆತನಿಗೆ ಪ್ರಚೋದನೆ ನೀಡಿದ್ದರು.

ಅಪ್ರಾಪ್ತ ಬಾಲಕಿ ಶೆಡ್‌ನಿಂದ ಹೊರಗೆ ಬರದಂತೆ ಕೂಡಿಟ್ಟಿದ್ದರು. ಅಲ್ಲದೇ 3 ಲಕ್ಷ ಹಣ ಕೊಟ್ಟರೆ ಮಾತ್ರ ನಿಮ್ಮ ಮಗಳನ್ನು ಇಲ್ಲಿಂದ ವಾಪಸ್ ಕಳಿಸುವುದಾಗಿ ಬಾಲಕಿ ತಂದೆಗೆ ಬೆದರಿಕೆಯೊಡ್ಡಿದ್ದರು. ಈ ಸಂಬಂಧ ಬಾಲಕಿ ತಂದೆ ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಚಿಕ್ಕೋಡಿಯ ತನಿಖಾಧಿಕಾರಿ ಎಂ.ಎಸ್.ನಾಯ್ಕ ಜಿಲ್ಲಾ ಪೋಕ್ಸೋ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಿ.ಎಂ.ಪುಷ್ಪಲತಾ ಅವರು, ಆರೋಪಿತರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿದ್ದಾರೆ. ಅದೇ ರೀತಿ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಪರಿಹಾರಧನ ಪಡೆಯುವಂತೆ ಸಂತ್ರಸ್ತೆಯ ತಂದೆಗೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು.

Font Awesome Icons

Leave a Reply

Your email address will not be published. Required fields are marked *