ಕೊಚ್ಚಿ: ಸೀರಿಯಲ್ ನಟಿ ರೆಂಜೂಷಾ ಮೆನನ್ ಅವರ ನಿಧನದ ಆಘಾತದ ನಡುವೆ, ಮತ್ತೊಂದು ಸಾವಿನ ಸುದ್ದಿ ಮಲಯಾಳಂ ಟಿವಿ ಉದ್ಯಮವನ್ನು ಬೆಚ್ಚಿಬೀಳಿಸಿದೆ. ಕರುತಮುತ್ತು ಸೇರಿದಂತೆ ಹಲವು ಸೀರಿಯಲ್ಗಳಲ್ಲಿ ನಟಿಸಿದ್ದ ನಟಿ ಡಾ.ಪ್ರಿಯಾ ಹೃದಯ ಸ್ತಂಭನದಿಂದ ಸಾವು ಕಂಡಿದ್ದಾರೆ. ಮಂಗಳವಾರ (ಅಕ್ಟೋಬರ್ 31) ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಾಗ 35 ವರ್ಷದ ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ನಟ ಕಿಶೋರ್ ಸತ್ಯ ಅಭಿಮಾನಿಗಳೊಂದಿಗೆ ಸುದ್ದಿ ಹಂಚಿಕೊಂಡಿದ್ದಾರೆ.
ಡಾಕ್ಟರ್ ಪ್ರಿಯಾ ಹೃದಯ ಸ್ತಂಭನದಿಂದ ನಿಧನರಾದರು. ಸಾಯುವ ವೇಳೆ ಆಕೆ ಎಂಟು ತಿಂಗಳ ಗರ್ಭಿಣಿಯಾಗಿದ್ದಳು. ನವಜಾತ ಶಿಶು ಸದ್ಯ ಐಸಿಯುನಲ್ಲಿದೆ. ಆಕೆಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ, ಅವರು ಸಾಮಾನ್ಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದರು, ಅಲ್ಲಿಯೇ ಆಕೆಗೆ ಹೃದಯ ಸ್ತಂಭನವಾಯಿತು. ತನ್ನ ಒಬ್ಬಳೇ ಮಗಳ ಸಾವಿನ ನಂತರ ಆಕೆಯ ತಾಯಿ ಆಘಾತಗೊಂಡಿದ್ದಾರೆ.
ಕಳೆದ ಆರು ತಿಂಗಳಿಂದ ತನ್ನನ್ನು ನೋಡಿಕೊಳ್ಳುತ್ತಿದ್ದ ಆಕೆಯ ಗಂಡನ ನೋವು ಹೇಳತೀರದು. ನಿನ್ನೆ ರಾತ್ರಿ ಆಸ್ಪತ್ರೆಗೆ ಹೋದಾಗ ಅವರಿಗೆ ಹೇಗೆ ಸಾಂತ್ವನ ಹೇಳಬೇಕೆಂದು ತಿಳಿಯಲಿಲ್ಲ. ಇಂಥ ಒಳ್ಳೆಯ ಜನರಿಗೆ ದೇವರು ಏಕೆ ಕ್ರೂರನಾಗಿದ್ದಾನೆ? ರೆಂಜೂಷಾ ಅವರ ನಿಧನವನ್ನು ಮರೆಯುವ ಮುನ್ನವೇ ಮತ್ತೊಂದು ನಿಧನ. 35ರ ಹರೆಯದ ವ್ಯಕ್ತಿಯೊಬ್ಬರು ಇಹಲೋಕ ತ್ಯಜಿಸುತ್ತಿರುವಾಗ ಸಂತಾಪ ಸೂಚಿಸುವ ಮಾತು ಕೂಡ ಸರಿಹೋಗುವುದಿಲ್ಲ, ಇದನ್ನು ಪ್ರಿಯಾಳ ತಂದೆ-ತಾಯಿ ಮತ್ತು ಆಕೆಯ ಪತಿ ಹೇಗೆ ಎದುರಿಸುತ್ತಾರೆಯೋ ಗೊತ್ತಿಲ್ಲ. ಅವರಿಗೆ ಧೈರ್ಯ ಬರಲಿ’ ಎಂದು ಭಾವುಕರಾಗಿ ಕಿಶೋರ್ ಸತ್ಯ ಬರೆದುಕೊಂಡಿದ್ದಾರೆ.