ಮುಂಬೈ: ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದು, ಕಪ್ ಗೆಲ್ಲುವ ಹಾಟ್ ಫೇವರಿಟ್ ತಂಡಗಳಲ್ಲಿ ಒಂದಾಗಿದೆ. ಇತ್ತ ದೇಶಾದ್ಯಂತ ಟೀಂ ಇಂಡಿಯಾ ಫಿನಾಲೆ ಪ್ರವೇಶಿಸುತ್ತಿದ್ದಂತೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಸೆಲೆಬ್ರಿಟಿಗಳು ಸಹ ವಿಶ್ ಮಾಡಿದ್ದಾರೆ.
ಬುಧವರಾ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಮೊದಲ ಸೆಮಿಫಿನಾಲೆ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಫಿನಾಲೆಗೆ ಲಗ್ಗೆ ಇಟ್ಟಿತ್ತು. ಈ ಪಂದ್ಯಕ್ಕೆ ಬಾಲಿವುಡ್ ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಸಾಕ್ಷಿಯಾಗಿದ್ದರು. ಇದರಲ್ಲಿ ಮುಖ್ಯವಾಗಿ ಸೂಪರ್ಸ್ಟಾರ್ ರಜಿನಿಕಾಂತ್ ಅವರು ಸಹ ಭಾರತದ ಗೆಲುವನ್ನು ಸಂಭ್ರಮಿಸಿದ್ದಾರೆ.
ಇದೀಗ ಫೈನಲ್ನಲ್ಲಿ ಏನಾಗಲಿದೆ ಎಂದು ರಜನಿಕಾಂತ್ ಭವಿಷ್ಯ ನುಡಿದಿದ್ದಾರೆ. ಪಂದ್ಯ ಮುಗಿಸಿ ಚೆನ್ನೈಗೆ ಮರಳಿದ ಬಳಿಕ ಮಾಧ್ಯಮಗಳ ಜೊತೆ ರಜನಿಕಾಂತ್ ಮಾತನಾಡಿರುವ ಅವರು ಟೀಂ ಇಂಡಿಯಾ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಮೊದಲಿಗೆ ನನಗೆ ನರ್ವಸ್ ಆಗಿತ್ತು. ಒಂದೂವರೆ ಗಂಟೆಗಳ ಕಾಲ ನರ್ವಸ್ ಆಗಿದ್ದೆ. ನಂತರ ನ್ಯೂಜಿಲೆಂಡ್ ವಿಕೆಟ್ ಪತನವಾಗಲು ಆರಂಭಿಸಿದಾಗ ಎಲ್ಲವೂ ಸರಿ ಆಯಿತು. ನನಗೆ ಶೇಕಡ ನೂರರಷ್ಟು ಭರವಸೆ ಇದೆ. ಟೀಂ ಇಂಡಿಯಾ ನಿಜಕ್ಕೂ ಪ್ರಬಲವಾಗಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲ ವಿಭಾಗದಲ್ಲೂ ಸರಿಸಾಟಿಯಿಲ್ಲದ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಇದರಿಂದ ಕ್ರಿಕೆಟ್ ಪ್ರೇಮಿಗಳಿಗೆ ಟೀಮ್ ಇಂಡಿಯಾ ಮೇಲೆ ನೂರಕ್ಕೆ ನೂರರಷ್ಟು ಭರವಸೆ ಮೂಡಿದೆ. ಆಸ್ಟ್ರೇಲಿಯಾ ಕೂಡ ಪ್ರಬಲ ತಂಡವೇ ಆಗಿದ್ದರೂ ಇಂಡಿಯಾಗೆ ಜಯ ಖಚಿತ ಎಂದು ನಿರೀಕ್ಷೆ ಇಡಲಾಗಿದೆ ಎಂದು ಸೂಪರ್ಸ್ಟಾರ್ ರಜಿನಿಕಾಂತ್ ಹೇಳಿದ್ದಾರೆ.