ಮೈಸೂರು,ನವೆಂಬರ್,23,2023(www.justkannada.in): ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಕುರಿತು ರಾಜ್ಯಸರ್ಕಾರ ಮನಸ್ಸು ಮಾಡದೆ ಇರುವುದರಿಂದ ಆಡಳಿತಾಧಿಕಾರಿಗಳನ್ನು ನೇಮಿಸುವ ವ್ಯವಸ್ಥೆ ನಿರಂತರವಾಗಿ ಮುಂದುವರಿದಿದ್ದು,ಇದೀಗ ಮೈಸೂರು ಮಹಾನಗರಪಾಲಿಕೆಯು ಸೇರಿಕೊಂಡಿದೆ.
ಕಳೆದ ಎರಡು ವರ್ಷಗಳಿಂದ ಜಿಪಂ,ತಾಪಂನಲ್ಲಿ ಆಡಳಿತಾಧಿಕಾರಿಗಳೇ ಕಾರ್ಯ ನಿರ್ವಹಿಸುತ್ತಿದ್ದರೆ, ಇದೀಗ ಸಾಂಸ್ಕೃತಿಕ ರಾಜಧಾನಿಯ ಕೇಂದ್ರಸ್ಥಾನವಾದ ಮೈಸೂರು ಮಹಾನಗರಪಾಲಿಕೆಯ ಅವಧಿ ಮುಗಿದ ಕಾರಣ ಪ್ರಾದೇಶಿಕ ಆಯುಕ್ತರಿಗೆ ಆಡಳಿತಾಧಿಕಾರಿಯ ಹೊಣೆ ವಹಿಸಲಾಗಿದೆ. ವರ್ಷ ಕಳೆದರೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಚುನಾವಣೆ ನಡೆಸದೆ ಇರುವ ಕಾರಣ ಹಲವಾರು ಮುಖಂಡರು ಚುನಾವಣೆ ನಡೆಸುವುದನ್ನೇ ಎದುರು ನೋಡುತ್ತಿದ್ದಾರೆ. ಹೀಗಿದ್ದರೂ, ರಾಜ್ಯಸರ್ಕಾರ ಚುನಾವಣೆ ನಡೆಸುವ ಬಗ್ಗೆ ಆಸಕ್ತಿ ತೋರದೆ ಇರುವುದರಿಂದ ಸದ್ಯಕ್ಕೆ ಪ್ರಮುಖ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳೇ ಜವಾಬ್ದಾರಿ ನಿರ್ವಹಿಸಬೇಕಿರುವುದರಿಂದ ಒತ್ತಡ ಬೀಳುವ ಜತೆಗೆ ಆಡಳಿತದ ಮೇಲೂ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರುವುದಕ್ಕೆ ಶುರುವಾಗಿದೆ.
2021ರಲ್ಲಿ ಜಿಲ್ಲಾ ಪಂಚಾಯಿತಿ,ತಾಲ್ಲೂಕು ಪಂಚಾಯಿತಿಯ ಐದು ವರ್ಷಗಳ ಆಡಳಿತ ಮುಗಿದ ಮೇಲೆ ಹಿರಿಯ ಐಎಎಸ್ ಅಧಿಕಾರಿಗಳನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದ್ದು, ಈತನಕ ಚುನಾವಣೆ ನಡೆದಿಲ್ಲ. ಆಡಳಿತಾಧಿಕಾರಿಗಳು ಮೈಸೂರು ಕೇಂದ್ರ ಸ್ಥಾನದಲ್ಲಿ ಇಲ್ಲದ ಕಾರಣ ಪ್ರಮುಖ ಮತ್ತು ತುರ್ತು ಕೆಲಸದ ಕಡತಗಳನ್ನು ಬೆಂಗಳೂರು ನಗರಕ್ಕೆ ಹೊತ್ತೊಯ್ಯಬೇಕಾಗಿದ್ದರೆ, ತಿಂಗಳಿಗೊಮ್ಮೆ ನಡೆಯುವ ಕೆಡಿಪಿ ಸಭೆಯು ಸರಿಯಾಗಿ ನಡೆಯುತ್ತಿಲ್ಲ. ಮುಖ್ಯಮಂತ್ರಿಗಳು ಬಂದಾಗ ಅಥವಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ತ್ರೈಮಾಸಿಕ ಸಭೆಯಲ್ಲಿ ಪಾಲ್ಗೊಳ್ಳುವುದು ಬಿಟ್ಟರೆ ಬೇರೆ ಸಂದರ್ಭದಲ್ಲಿ ಮೈಸೂರಿನತ್ತ ಮುಖ ಮಾಡದ ಕಾರಣ ಅಧಿಕಾರಿಗಳು ಕಾದು ಕುಳಿತುಕೊಳ್ಳುವಂತಾಗಿದೆ. ಇದೇ ರೀತಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶಕರ ಅವಧಿ ಮುಗಿದು ಒಂದು ವರ್ಷ ಕಳೆದರೂ ಈತನಕ ಮತದಾರರ ಪಟ್ಟಿಯನ್ನು ಪ್ರಕಟಿಸಿ ಚುನಾವಣೆ ನಡೆಸುವ ಗೋಜಿಗೆ ಸರ್ಕಾರ ಕೈ ಹಾಕಿಲ್ಲ. ಲಾಭವಿಲ್ಲದ ಎಪಿಎಂಸಿಗೆ ಚುನಾವಣೆ ನಡೆಸದೆ ಇದ್ದರೂ ಮೈಸೂರು,ನಂಜನಗೂಡು, ಕೆ.ಆರ್.ನಗರ ತಾಲ್ಲೂಕು ಎಪಿಎಂಸಿಗಳು ಕೋಟ್ಯಾಂತರ ರೂಪಾಯಿ ಆದಾಯ ಗಳಿಸುವಂತಾಗಿದ್ದರೂ ಚುನಾವನೆ ನಡೆಸದ ಕಾರಣ ಅನೇಕರು ಎದುರು ನೋಡುತ್ತಿದ್ದಾರೆ.
ಪಕ್ಕದ ಚಾಮರಾಜನಗರ ಜಿಲ್ಲೆಯಲ್ಲಿ ಚುನಾವಣೆ ನಡೆದು ಅಧ್ಯಕ್ಷ-ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದರೂ ಮೈಸೂರು ಜಿಲ್ಲೆಯಲ್ಲಿ ನಡೆದಿಲ್ಲ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಟಿ.ಸೋಮಶೇಖರ್ ಅವರು ಸಹಕಾರ ಸಚಿವರಾಗಿದ್ದಾಗ ಅನೇಕರು ಒತ್ತಡ ಹೇರಿ ಚುನಾವಣೆ ನಡೆಯದಂತೆ ನೋಡಿಕೊಂಡಿದ್ದರು. ಇದೀಗ ಸರ್ಕಾರ ಬದಲಾಗಿ ಸಹಕಾರ ಸಚಿವರೂ ಬೇರೆಯವರಾಗಿದ್ದರೂ ಜಿಲ್ಲಾಡಳಿತ ಅಧಿಸೂಚನೆ ಹೊರಡಿಸದೆ ಕುಳಿತಿರುವುದರಿಂದ ಅಧಿಕಾರಿಗಳೇ ಎಲ್ಲಾ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಮೈಸೂರು ಮಹಾನಗರಪಾಲಿಕೆಯ ಐದು ವರ್ಷಗಳ ಅಧಿಕಾರಾವಧಿ ಅಂತ್ಯವಾಗಿದ್ದರಿಂದ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಡಿಸೆಂಬರ್ ಒಳಗೆ ಚುನಾವಣೆ ನಡೆಸುತ್ತೇವೆಂದು ನಗರಾಭಿವೃದ್ಧಿ ಸಚಿವರು ಹೇಳಿದ್ದರೂ ಜಿಲ್ಲಾಡಳಿತವಾಗಲೀ ಅಥವಾ ರಾಜ್ಯ ಚುನಾವಣಾ ಆಯೋಗದಿಂದ ಯಾವ ಪ್ರಕ್ರಿಯೆಗಳು ನಡೆದಿಲ್ಲ. ಒಂದು ವೇಳೆ ಚುನಾವಣೆ ನಡೆಸುವುದಕ್ಕೆ ಸರ್ಕಾರ ಇಚ್ಛಿಸಿದಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಅಧಿಸೂಚನೆ ಹೊರಡಿಸುವುದಕ್ಕೆ ಸಮಯ ಬೇಕು. ನಂತರ, ಅಂತಿಮ ಮತದಾರರ ಪಟ್ಟಿ ಪ್ರಕಟಿಸಿ ದಿನಾಂಕ ಘೋಷಣೆ ಮಾಡುವ ಹೊತ್ತಿಗೆ ಎರಡು ತಿಂಗಳಾಗಬಹುದು ಅಥವಾ ಮತ್ತಷ್ಟು ತಿಂಗಳು ಬೇಕಾಗುವ ಕಾರಣ ಆಡಳಿತಾಧಿಕಾರಿಯ ಆಡಳಿತ ಇರುತ್ತದೆ.
ಅಧಿಕಾರಿಗಳಿಗೆ ಡಬ್ಬಲ್ ಕೆಲಸ…
ಪ್ರಮುಖ ಸಂಸ್ಥೆಗಳಿಗೆ ಅಧ್ಯಕ್ಷರು ಇಲ್ಲದ ಕಾರಣ ನಿಯೋಜನೆಗೊಂಡ ಅಧಿಕಾರಿಗಳಿಗೆ ಡಬ್ಬಲ್ ಕೆಲಸವಾಗಿದೆ. ಜಿಪಂ ಆಡಳಿತಾಧಿಕಾರಿಯಾಗಿರುವ ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಅವರು ಬೆಂಗಳೂರು-ಮೈಸೂರು ನಡುವೆ ಓಡಾಡಲು ಸಾಧ್ಯವಾಗದೆ ಪ್ರಮುಖ ದಿನಗಳಲ್ಲಿ ಮಾತ್ರ ಬರುತ್ತಾರೆ. ಇದರಿಂದಾಗಿ ಕಡತಗಳು ಸಹಿಗಾಗಿ ಕಾದು ಕುಳಿತಿದ್ದರೆ, ತುರ್ತು ಇದ್ದರೆ ಬೆಂಗಳೂರಿಗೆ ಹೋಗಬೇಕಿದೆ. ಜಿಲ್ಲಾಧಿಕಾರಿಗಳು ಮುಡಾ ಅಧ್ಯಕ್ಷರಾಗಿರುವ ಕಾರಣ ಅನೇಕ ವಿಚಾರಗಳನ್ನು ಗಮನಿಸಬೇಕು. ಪ್ರಾಧಿಕಾರದ ಸಭೆ ನಡೆಯುವ ಜತೆಗೆ ಇನ್ನಿತರ ವಿಚಾರಗಳ ಬಗ್ಗೆ ನೋಡಿಕೊಳ್ಳುವ ಜತೆಗೆ ಜಿಲ್ಲಾಡಳಿತದ ಕೆಲಸ ಮಾಡಬೇಕಿದೆ. ಪ್ರಾದೇಶಿಕ ಆಯುಕ್ತರು ಎಂಟು ಜಿಲ್ಲೆಯನ್ನು ನೋಡಬೇಕಿರುವ ಜೊತೆಗೆ ಬೆಂಗಳೂರಲ್ಲಿ ನಡೆಯುವ ಹಲವಾರು ಸಭೆಗಳಲ್ಲಿ ಭಾಗವಹಿಸಬೇಕು. ಇದೀಗ ಅವರಿಗೆ ಪಾಲಿಕೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿರುವ ಕಾರಣ ಸಮಯ ಮೀಸಲಿಡಬೇಕು. ಒಂದು ಲಕ್ಷಕ್ಕಿಂತ ಹೆಚ್ಚು ಮೊತ್ತದ ಬಿಲ್ ಪಾಸಾಗಬೇಕಾದರೆ ಮಹಾಪೌರರ ಅಥವಾ ಆಡಳಿತಾಧಿಕಾರಿಯ ಸಹಿ ಅಗತ್ಯವಿರುವ ಕಾರಣ ಮುಂದೆ ಕಚೇರಿಗೆ ಆಗಮಿಸುವುದನ್ನು ಕಾದು ಕುಳಿತುಕೊಳ್ಳುವಂತಾಗಿದೆ.
Key words: Appointment – administrative -officers – mysore-city Corporation