ಪುತ್ತೂರು: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಸಹಾಯಕ ಶಿಲ್ಪಿಯಾಗಿ ಕಾರ್ಯನಿರ್ವಹಿಸಿದ ಪುತ್ತೂರಿನ ಸುಮಂತ್ ಆಚಾರ್ಯ ಕೆ.ಎಸ್ ಕೈಜೋಡಿಸಿದ್ದಾರೆ. ತಂದೆ ಆಯೋಧ್ಯಾ ಕರಸೇವಕನಾಗಿದ್ದರೆ, ಮಗನಿಗೆ ಶ್ರೀರಾಮನ ಮೂರ್ತಿ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಆಲಯ ಶಾಸ್ತ್ರ ಹಾಗೂ ಶಿಲ್ಪ ಶಾಸ್ತ್ರದ ವಿದ್ಯಾರ್ಥಿಯಾಗಿರುವ ಸುಮಂತ್ ಆಚಾರ್ಯ ಕೆ.ಎಸ್. ಪುತ್ತೂರಿನ ನಗರಸಭಾ ವ್ಯಾಪ್ತಿಯ ಸಾಮೆತ್ತಡ್ಕ ನಿವಾಸಿ ಸುರೇಂದ್ರ ಆಚಾರ್ಯ ಹಾಗೂ ಉಮಾವತಿ ಆಚಾರ್ಯ ಅವರ ಏಕೈಕ ಪುತ್ರ. ಪ್ರಸ್ತುತ ಬೆಂಗಳೂರಿನ ಸಾಂಪ್ರದಾಯಿಕ ಶಿಲ್ಪ ಗುರುಕುಲದಲ್ಲಿ ಜ್ಞಾನನಂದ ಗುರುಗಳ ಮಾರ್ಗದರ್ಶನದಲ್ಲಿ ಬಿವಿಎ (ಟೆಂಪಲ್ ಆರ್ಕಿಟೆಕ್ಚರ್) ಅಂತಿಮ ಪದವಿ ವ್ಯಾಸಾಂಗ ಮಾಡುತ್ತಿದ್ದಾರೆ.
ಅರುಣ್ ಯೋಗಿರಾಜ್ ತಂಡದಲ್ಲಿ ಕೆಲಸ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರ ನೇತೃತ್ವದ 10 ಮಂದಿಯ ತಂಡದಲ್ಲಿ ಅಯೋಧ್ಯೆಯಲ್ಲಿ ಮೂರ್ತಿ ನಿರ್ಮಾಣ ಕೆಲಸದಲ್ಲಿ 2 ತಿಂಗಳು ಸುಮಂತ್ ಆಚಾರ್ಯ ತೊಡಗಿಸಿಕೊಂಡಿದ್ದಾರೆ. ರಾಮಲಲ್ಲಾ ಮೂರ್ತಿಯ ಕುಸುರಿ ಕೆಲಸ, ಬಳ್ಳಿ, ಸಣ್ಣ ವಿಗ್ರಹಗಳು, ಪಾಲಿಶಿಂಗ್ ಕೆಲಸಗಳನ್ನು ತಂಡದಲ್ಲಿ ನಿರ್ವಹಿಸಿದ್ದಾರೆ.2 ತಿಂಗಳ ಅವಧಿಯಲ್ಲಿ ರಾತ್ರಿಯ ಪಾಲಿಯಲ್ಲಿ ರಾತ್ರಿ 8 ಗಂಟೆಯಿಂದ ಬೆಳಗ್ಗೆ8 ಗಂಟೆಯ ತನಕ ಕೆಲಸ ನಿರ್ವಹಿಸಿದ್ದೇವೆ. ನಮಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿತ್ತು ಎಂದು ಸುಮಂತ್ ಆಚಾರ್ಯ ಹೇಳಿದ್ದಾರೆ.
ರಾಮನೊಂದಿಗೆ ರಾತ್ರಿ ಅವಧಿಯಲ್ಲಿ ಕೆಲಸ ಮಾಡುತ್ತಿದ್ದಾಗ ಬೇರೆ ಏನೂ ಗೊತ್ತಾಗುತ್ತಿರಲಿಲ್ಲ. ಶ್ರದ್ಧೆ, ಭಕ್ತಿಯೊಂದಿಗೆ ಕೆಲಸ ಮಾಡಿದ್ದೇವೆ. ಆಯೋಧ್ಯೆ ತುಂಬಾ ಅಂದವಾಗಿದೆ. ದೇವಾಲಯದ ಜತೆಗೆ ಅಯೋಧ್ಯಾ ನಗರ ನಿರ್ಮಾಣವಾಗುತ್ತಿದೆ. ಅಲ್ಲಿನ ನಿವಾಸಿಗಳು ನಮ್ಮನ್ನೆಲ್ಲಾ ವಿಶೇಷವಾಗಿ ಸತ್ಕಾರ ಮಾಡಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.