ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರಿಗೆ 27ನೇ ಸ್ಥಾನ

ಮೈಸೂರು: ದೇಶದ ಸ್ವಚ್ಛ ನಗರಗಳಲ್ಲಿ ಒಂದಾದ ಮೈಸೂರು ಕಳೆದ ಬಾರಿ ಎಂಟನೇ ಸ್ಥಾನದಲ್ಲಿದ್ದರೆ, ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ 27ನೇ ಸ್ಥಾನಕ್ಕೆ ಕುಸಿದಿದೆ. ಇದು ಮೈಸೂರಿಗರಿಗೆ ನಿರಾಸೆಯನ್ನು ತಂದಿದೆ.

ಇನ್ನು 3 ರಿಂದ 10 ಲಕ್ಷ ಜನ ಸಂಖ್ಯೆಯೊಳಗಿನ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ತಿರುಪತಿಗೆ ಸಿಕ್ಕಿದ್ದರೆ ಎರಡನೇ ಸ್ಥಾನ ಮೈಸೂರು ನಗರಕ್ಕೆ ಲಭಿಸಿರುವುದು ಸಮಾಧಾನ ತಂದಿದೆ. ಕೇಂದ್ರ ಸರಕಾರದ ನಗರಾಭಿವೃದ್ದಿ ಇಲಾಖೆಯಿಂದ ಕಳೆದ ಸಾಲಿನಲ್ಲಿ ದೇಶದಾದ್ಯಂತ ನಡೆಸಿದ ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಮೈಸೂರು ನಗರ ಕೂಡ ಭಾಗಿಯಾಗಿತ್ತು.

ಕಳೆದ 2023ರ ಏಪ್ರಿಲ್ ಮತ್ತು ಮೇ ನಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆಯಲ್ಲಿ ಕೇಂದ್ರ ಸರಕಾರದ ಅಧಿಕಾರಿಗಳ ತಂಡ ಮೈಸೂರು ನಗರಕ್ಕೆ ಆಗಮಿಸಿ ನಗರದ ಸ್ವಚ್ಛತೆ ನಿರ್ವಹಣೆ, ಘನತ್ಯಾಜ್ಯ ವಸ್ತು ನಿರ್ವಹಣೆ, ಮನೆ ಮನೆಯಿಂದ ಕಸ ಸಂಗ್ರಹ, ಸಾರ್ವಜನಿಕ ಶೌಚಾಲಯ ಸ್ಥಿತಿಗತಿ, ಮಳೆ ನೀರು ಮತ್ತು ಒಳಚರಂಡಿ ಸ್ಥಿತಿಗತಿ ಸೇರಿದಂತೆ ಹಲವು ವಿಭಾಗಳ ಪರಿಶೀಲನೆ ನಡೆಸುವುದರೊಂದಿಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಪ್ರಶಸ್ತಿಗೆ ಪರಿಗಣನೆ ನಡೆಸಲಾಗಿತ್ತು.

ಮೈಸೂರು ನಗರ ದೇಶದ ಸ್ವಚ್ಛತಾ ನಗರಿ ಪಟ್ಟಿಯಲ್ಲಿ 27ನೇ ಸ್ಥಾನ ಪಡೆದಿದೆ. ಜತೆಗೆ 3 ರಿಂದ 10 ಲಕ್ಷ ಜನ ಸಂಖ್ಯೆ ವಿಭಾಗದಲ್ಲಿ ರಾಷ್ಟಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ಎನ್.ವೆಂಕಟೇಶ್ ತಿಳಿಸಿದ್ದಾರೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ನಗರಾಭಿವೃದ್ದಿ ಸಚಿವರಿಂದ ಪಾಲಿಕೆಯ ಆಡಳಿತಾಧಿಕಾರಿ ಡಾ.ಜಿ.ಸಿ.ಪ್ರಕಾಶ್, ಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಷರೀದ್, ಆರೋಗ್ಯಾಧಿಕಾರಿ ಡಾ.ಎನ್.ಪಿ.ವೆಂಕಟೇಶ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *