ಬೆಂಗಳೂರು: ಅಖಿಲ ಭಾರತ ಸ್ವಚ್ಛ ಸರ್ವೇಕ್ಷಣಾ 2023 ವರದಿಯಲ್ಲಿ ಬೆಂಗಳೂರು 125 ನೇ ಸ್ಥಾನದಲ್ಲಿದೆ. 2022 ರ ಸ್ವಚ್ಛ ಸರ್ವೇಕ್ಷಣ ಶ್ರೇಯಾಂಕದಲ್ಲಿ, ಬೆಂಗಳೂರು ನಗರವು 43ನೇ ಸ್ಥಾನದಲ್ಲಿತ್ತು. 2021ರಲ್ಲಿ 28ನೇ ಮತ್ತು 2020ರಲ್ಲಿ 37ನೇ ಸ್ಥಾನದಲ್ಲಿತ್ತು.
ಸ್ವಚ್ಛ ಸರ್ವೇಕ್ಷಣ 2023ರ ವರದಿಯ ಪ್ರಕಾರ, ಕರ್ನಾಟಕದ ಒಂದು ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯ ವರ್ಗದಲ್ಲಿರುವ 25 ನಗರಗಳಲ್ಲಿ, ಬಿಬಿಎಂಪಿ ಮೂರನೇ ಸ್ಥಾನದಲ್ಲಿದೆ. ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳು ಪಡೆದುಕೊಂಡಿವೆ.
ವರದಿಯ ಪ್ರಕಾರ, ಮೂಲದಲ್ಲಿ ತ್ಯಾಜ್ಯವನ್ನು ಬೇರ್ಪಡಿಸುವ ವಿಭಾಗದಲ್ಲಿ ಬೆಂಗಳೂರು ಶೇಕಡಾ 99ರಷ್ಟು ಸಾಧಿಸಿದೆ. ಆದರೆ ತ್ಯಾಜ್ಯ ವಿಲೇವಾರಿ ಪರಿಹಾರದಲ್ಲಿ ಶೂನ್ಯ ಸಾಧನೆ ಮಾಡಿದೆ. ನಗರವು ಸೇವಾ ಮಟ್ಟದ ಪ್ರಗತಿ ವಿಭಾಗದಲ್ಲಿ 4,830 ಅಂಕಗಳಿಗೆ 2,805.32 ಅಂಕಗಳು, ಪ್ರಮಾಣೀಕರಣ ವಿಭಾಗದಲ್ಲಿ 2,500ರಲ್ಲಿ 1,125 ಮತ್ತು ನಾಗರಿಕರ ಧ್ವನಿ ವಿಭಾಗದಲ್ಲಿ 2,170 ರಲ್ಲಿ 1,589.82 ಅಂಕಗಳನ್ನು ಗಳಿಸಿದೆ.