ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ 10 ಸಾವಿರ ರೂಪಾಯಿ ದಂಡ ಹಾಕಿದ್ದು,ಸಿಎಂ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ. ಜನ ನಾಯಕರಾದವರು ಮೊದಲು ಕಾನೂನು ಪಾಲಿಸಬೇಕು ಎಂದಿದ್ದು, ವಿಚಾರಣೆಗೆ ಹಾಜರಾಗಲು ಮಹತ್ವದ ಆದೇಶ ನೀಡಿದೆ.
2022ರ ಏಪ್ರಿಲ್ 14ರಂದು ನಗರದ ರೇಸ್ ವ್ಯೂ ಹೋಟೆಲ್ ಬಳಿ ಕಾಂಗ್ರೆಸ್ ನಾಯಕರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಅಂದಿನ ಸಚಿವ ಕೆ.ಎಸ್ ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಹೋರಾಟ ನಡೆಸಿದ್ದರು.
ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಆರೋಪಿಗಳ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್ ಕೂಡ NBW ಜಾರಿ ಮಾಡಿತ್ತು. ಕಾಂಗ್ರೆಸ್ ನಾಯಕರ ಅರ್ಜಿಯನ್ನು ವಜಾಗೊಳಿಸಲಾಗಿದ್ದು, ಹೈಕೋರ್ಟ್ ತಲಾ 10 ಸಾವಿರ ರೂಪಾಯಿ ದಂಡ ಹಾಕಿ ಆದೇಶಿಸಿದೆ.
ಈ ವಿಚಾರಣೆ ವೇಳೆ ಮೇಲ್ಮನವಿ ಸಲ್ಲಿಸುವವರೆಗೆ ಆದೇಶಕ್ಕೆ ತಡೆ ನೀಡಲು ಸಿದ್ದರಾಮಯ್ಯ ಪರ ವಕೀಲರ ಮನವಿ ಮಾಡಿದರು. ಇದಕ್ಕೆ ಗರಂ ಆದ ಹೈಕೋರ್ಟ್, ಜನಪ್ರತಿನಿಧಿಗಳು ಕಾನೂನು ಪಾಲಿಸಿದರೆ ಇದ್ರೆ ಜನ ಪಾಲಿಸುತ್ತಾರಾ? ಜನ ನಾಯಕರಾದವರು ಮೊದಲು ಕಾನೂನು ಪಾಲಿಸಬೇಕು. ಇದೇ ಮಾರ್ಚ್ 6ಕ್ಕೆ ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಹಾಜರಾಗಲು ಸೂಚನೆ ನೀಡಿದೆ.