ಮಂಗಳೂರು: (ಬೀದರ್) ‘ನಾನು ಅರಣ್ಯ ಮತ್ತು ಪರಿಸರ ಖಾತೆ ಸಚಿವನಾಗಿದ್ದೀನಿ. ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗೆ ಸಾಕಷ್ಟು ಜನ ಸಮರ್ಥರು ಆಕಾಂಕ್ಷಿಗಳಿದ್ದಾರೆ. ಅವರಲ್ಲಿ ಯಾರನ್ನೇ ಹೈಕಮಾಂಡ್ ಕಣಕ್ಕಿಳಿಸಿದರೂ ಗೆಲ್ಲಿಸಿಕೊಂಡು ಬರುತ್ತೇವೆ’.
‘ಬೀದರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚಿಸಿದರೆ ನೀವು ಸಿದ್ಧರಿದ್ದೀರಾ’ ಎಂಬ ಪ್ರಶ್ನೆಗೆ ಸಚಿವ ಈಶ್ವರ ಖಂಡ್ರೆ ಹೀಗೆ ಉತ್ತರಿಸಿದರು.
ಆ ಮೂಲಕ ತಾವು ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದರು. ಲೋಕಸಭೆ ಚುನಾವಣೆಯ ತಯಾರಿಗಾಗಿ ಇದೇ 17ರಂದು ಮಂಗಳೂರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ರಾಜ್ಯಮಟ್ಟದ ಸಮಾವೇಶ ನಡೆಯಲಿದೆ. ಚುನಾವಣೆಗೆ ನಾವು ಸಿದ್ಧರಾಗಿದ್ದು, 28ರಲ್ಲಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದರು.
ಹೆಲಿಕಾಪ್ಟರ್ ಅಗತ್ಯವಿಲ್ಲ:
‘ಅರಣ್ಯದಲ್ಲಿ ಕಾಣಿಸಿಕೊಳ್ಳುವ ಬೆಂಕಿ ನಂದಿಸುವುದಕ್ಕಾಗಿ ಅರಣ್ಯ ಇಲಾಖೆ ಹೆಲಿಕಾಪ್ಟರ್ ಖರೀದಿಸುವ ಅಗತ್ಯವಿಲ್ಲ. ಆದರೆ, ಅಗತ್ಯಬಿದ್ದರೆ ಖಾಸಗಿ ಹೆಲಿಕಾಪ್ಟರ್ಗಳ ಸೇವೆ ಪಡೆಯುತ್ತೇವೆ. ನಮ್ಮ ಅರಣ್ಯ ರಕ್ಷಣೆಗೆ ಏನೆಲ್ಲ ಮಾಡಬೇಕೋ ಅದನ್ನು ಮಾಡುತ್ತೇವೆ’ ಎಂದರು.