ಮೋದಿಯವರ ಭಯಕ್ಕೆ, ಸಿದ್ದರಾಮಯ್ಯ ನಾಟಕವಾಡುತ್ತಿದ್ದಾರೆ: ಭಗವಂತ ಖೂಬಾ

ಬೀದರ್: ‘ದೇಶದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಹವಾ ನೋಡಿ ಅದರ ಭಯಕ್ಕೆ ಸಿದ್ದರಾಮಯ್ಯನವರು ದಿನಕ್ಕೊಂದು ನಾಟಕವಾಡುತ್ತಿದ್ದಾರೆ’ ಎಂದು ಕೇಂದ್ರ ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಟೀಕಿಸಿದ್ದಾರೆ.

ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ದಿನಕ್ಕೊಂದು ನಾಟಕ, ದಿನಕ್ಕೊಂದು ಸುಳ್ಳು ಹೇಳಿಕೊಂಡು, ಸುಳ್ಳನ್ನು ಸತ್ಯ ಮಾಡಲು ಹೊರಟಿದೆ.

14 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರಿಗೆ ತೆರಿಗೆ ನಿಯಮಗಳು, ಆರ್ಥಿಕ ಹಂಚಿಕೆ ಬಗ್ಗೆ ಜ್ಞಾನವಿಲ್ಲದೆ ಇರುವುದು ರಾಜ್ಯದ ಜನರ ದುರ್ದೈವ ಎಂದು ಬುಧವಾರ ಪ್ರಕಟಣೆಯಲ್ಲಿ ಟೀಕೆ ಮಾಡಿದ್ದಾರೆ.

ದಿವಾಳಿಗೆ ತಳ್ಳುವಂತಹ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯನವರ ಸರ್ಕಾರ ಮೊದಲ ದಿನದಿಂದ ರಾಜ್ಯದ ಜನರಿಗೆ ಮೋಸ ಮಾಡುತ್ತಿದೆ. 10 ಕೆ.ಜಿ ಅಕ್ಕಿ ಕೊಡುವುದಾಗಿ ಹೇಳಿದ್ದ ಸಿದ್ದರಾಮಯ್ಯನವರು ಅದು ಸಾಧ್ಯವಾಗದೆ ಇದ್ದಾಗ ಮೋದಿಯವರ ಕಡೆ ಬೊಟ್ಟು ಮಾಡಿದ್ದರು. ಆಗಲೇ ಸಿದ್ದರಾಮಯ್ಯನವರ ಡ್ರಾಮಾ ಹೊರಬಿದ್ದಿತ್ತು. ಅದಾದ ಮೇಲೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅಭಿವೃದ್ದಿ ಕೆಲಸಗಳಿಗೆ ನಮ್ಮಲ್ಲಿ ಹಣವಿಲ್ಲ. ಈ ವರ್ಷ ಅಭಿವೃದ್ದಿ ಕೆಲಸಗಳು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು ಎಂದು ನೆನಪಿಸಿದ್ದಾರೆ.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಕೆಲ ದಿನಗಳ ಹಿಂದೆ ಐದು ಗ್ಯಾರಂಟಿಗಳು ಪೂರೈಸಲು ಸರ್ಕಾರದ ಬಳಿ ಹಣವಿಲ್ಲ. ಸುಮಾರು ₹60 ಸಾವಿರ ಕೋಟಿ ಹಣದ ಅವಶ್ಯಕತೆಯಿದೆ ಎಂದಿದ್ದರು. ಗ್ಯಾರಂಟಿಗಳು ಮುಂದುವರೆಸಲು ಕಷ್ಟವಾಗುತ್ತಿದೆ. ಈಗ ಚುನಾವಣೆ ಇರುವುದರಿಂದ ಸಿದ್ದರಾಮಯ್ಯನವರು ಪುನಃ ಮೋದಿಯವರ ಕಡೆಗೆ ಬೊಟ್ಟು ಮಾಡಿ, ಹೊಸ ನಾಟಕ ಶುರು ಮಾಡಿದ್ದಾರೆ ಎಂದಿದ್ದಾರೆ.

ತೆರಿಗೆ ಹಂಚಿಕೆ, ಆರ್ಥಿಕ ಸಹಾಯದ ಹಂಚಿಕೆಯ ನಿರ್ಧಾರಗಳನ್ನು ಸರ್ಕಾರ ಮಾಡುವುದಿಲ್ಲ, ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾದ ಹಣಕಾಸು ಆಯೋಗ ಮಾಡುತ್ತದೆ. ಈ ಆಯೋಗ ಪ್ರತಿ ಗ್ರಾಮ ಪಂಚಾಯಿತಿಯಿಂದ ರಾಜ್ಯ ಸರ್ಕಾರದವರೆಗೆ ಎಲ್ಲರಿಂದ ಸಲಹೆ ಪಡೆದು, ನೀತಿ ನಿಯಮಗಳನ್ನು ರೂಪಿಸುತ್ತದೆ. ತಾರತಮ್ಯಕ್ಕೆ ಅವಕಾಶ ಇರುವುದಿಲ್ಲ. ಇದು ಗೊತ್ತಿದ್ದರೂ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

2004 ರಿಂದ 2014ರ ವರೆಗೆ ರಾಜ್ಯಕ್ಕೆ ತೆರಿಗೆ ಪಾಲು ಬಂದಿದ್ದು ₹81,795 ಕೋಟಿ, 2014 ರಿಂದ 2024ರ ವರೆಗೆ ಬಂದಿದ್ದು ₹2.85 ಲಕ್ಷ ಕೋಟಿ. ಶೇ 250ರಷ್ಟು ಹೆಚ್ಚು. ಆರ್ಥಿಕ ಪರಿಹಾರ 2004 ರಿಂದ 2014ರ ವರೆಗೆ ರಾಜ್ಯಕ್ಕೆ ಬಂದಿದ್ದು ₹60,779 ಕೋಟಿ, 2014 ರಿಂದ 2024ರವರೆಗೆ ಬಂದದ್ದು ₹2.08 ಲಕ್ಷ ಕೋಟಿ. ಬರೋಬ್ಬರಿ ಶೇ 243ರಷ್ಟು ಹೆಚ್ಚು. ಕರ್ನಾಟಕಕ್ಕಷ್ಟೇ ಅಲ್ಲ. ಯಾವ ರಾಜ್ಯಕ್ಕೂ ಮೋದಿಯವರು ತಾರತಮ್ಯ ಮಾಡಿಲ್ಲ. ನವದೆಹಲಿಯಲ್ಲಿ ಸಿದ್ದರಾಮಯ್ಯನವರು ಡ್ರಾಮಾ ಮಾಡಿ ದೇಶದ ಮುಂದೆ ಕನ್ನಡಿಗರ ಮಾನ ಹರಾಜು ಹಾಕಿದ್ದಾರೆ ಎಂದು ಟೀಕಿಸಿದ್ದಾರೆ.

ಮಂತ್ರಿಗಿರಿ ಹನಿಮೂನ್‌ ಮೂಡ್‌ನಿಂದ ಹೊರಬಂದಿಲ್ಲ’ ‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಇನ್ನೂ ನಿದ್ರೆಯಿಂದ ಹೊರಬಂದಿಲ್ಲ. ಇನ್ನೂ ಮಂತ್ರಿಗಿರಿಯ ಹನಿಮೂನ್‌ ಮೂಡ್‌ನಿಂದ ಹೊರಬಂದಿಲ್ಲ’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಟೀಕಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಹಾಗೂ ನಮ್ಮ ಜಿಲ್ಲೆಯಲ್ಲಿ ಒಂದೇ ಒಂದು ಅಭಿವೃದ್ದಿ ಕೆಲಸಗಳು ಪ್ರಾರಂಭವಾಗಿಲ್ಲ. ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಅನುಭವ ಮಂಟಪದ ಕಾಮಗಾರಿಗೆ ರೈಲ್ವೆ ಯೋಜನೆಗಳಿಗೆ ಸಿಪೆಟ್‌ ಕಾಲೇಜಿನ ಅಭಿವೃದ್ದಿ ಕೆಲಸಗಳಿಗೆ ಅನುದಾನ ನೀಡುವಂತೆ ಹತ್ತಾರು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ರಾಜ್ಯ ಸರ್ಕಾರ ಅನುದಾನ ನೀಡಿಲ್ಲ ಎಂದು ಆರೋಪಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *