ಶಿರಸಿ: ನೀರಿನ ಕೊತರೆಯ ಕಾರಣ ಅಂಗನವಾಡಿಯಲ್ಲಿ ಅಡುಗೆ ಮಾಡಲು ಹಾಗೂ ಮಕ್ಕಳಿಗೆ ಕುಡಿಯಲು ಸಮಸ್ಯೆಯಾಗಿದ್ದು, ಇದನ್ನು ಪರಿಹರಿಸಲು ಗೌರಿ ನಾಯ್ಕ ಎಂಬ ಮಹಿಳೆ ಒಬ್ಬಂಟಿಯಾಗಿ ಬಾವಿ ತೋಡುವುದರಲ್ಲಿ ತೊಡಗಿದ್ದಾರೆ.
ಈಗಾಗಲೇ ಎರಡು ಬಾವಿ ತೋಡಿರುವ ಇವರು, ಅಂಗನವಾಡಿಯ ಹಿಂಭಾಗದ ಜಾಗದಲ್ಲಿ ಜ.೩೦ರಿಂದ ಬಾವಿ ತೋಡುತ್ತಿದ್ದು, ಈಗಾಗಲೇ ೧೫ ಅಡಿಗೂ ಹೆಚ್ಚು ಆಳ ಬಾವಿ ತೋಡಲಾಗಿದೆ. ಇದರಿಂದ ಮಕ್ಕಳಿಗಷ್ಟೇ ಅಲ್ಲ, ಊರಿನ ಉಳಿದ ಜನರಿಗೂ ಪ್ರಯೋಜನವಾಗಲಿದೆ.
೫೫ ವರ್ಷದ ಈಕೆ, ಅನುದಿನ ಮುಂಜಾನೆಯಿಂದ ಸಂಜೆಯವರೆಗೆ ಅಂಗನವಾಡಿಯ ಬಳಿ ಬಾವಿ ತೋಡುತ್ತಿದ್ದು, ನೀರು ಸಿಗುವುದೆಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ತಮ್ಮ ಜಮೀನಿನಲ್ಲಿ ತೋಡಿದ್ದ ಬಾವಿಯ ನೀರನ್ನು ಗಿಡಗಳಿಗೆ ನೀರುಣಿಸಲು ಬಳಸುವ ಗೌರಿ, ಉಳಿದದ್ದನ್ನು ಗ್ರಾಮದ ಜನರಿಗೆ ನೀಡುತ್ತಾರೆ.