ಉಡುಪಿ: ದೃಷ್ಟಿ ಮಿಡಿಯಾ ಪ್ರೊಡಕ್ಷನ್ನಡಿ ನಿರ್ಮಿಸಲಾದ ಹೆಣ್ಣಿನ ಭಾವನೆಯ ಸುತ್ತ ಹೆಣೆದಿರುವ ‘ರವಿಕೆ ಪ್ರಸಂಗ’ ಕನ್ನಡ ಚಲನಚಿತ್ರವು ಫೆ.16ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಸಿನೆಮಾದ ನಿರ್ದೇಶಕ ಸಂತೋಷ್ ಕೊಡಂಕೇರಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ರವಿಕೆ ಅಂದ ತಕ್ಷಣ ಅದರ ಬಗ್ಗೆ ಗಂಭೀರ ಚಿಂತನೆಗಿಂತ ಹತ್ತು ಹಲವು ಹಾಸ್ಯಾಸ್ಪದವಾದ ಭಾವನೆ ಬಹುತೇಕರಲ್ಲಿ ಸಹಜವಾಗಿ ಮೂಡುತ್ತದೆ. ಆದರೆ ಆ ರವಿಕೆಯಿಂದಲೇ ರವಿಕೆಯೊಳಗಿನ ಮನಸ್ಸಿನ ಭಾವನೆಯನ್ನು ಅನಾ ವರಣಗೊಳಿಸಿ, ಮಹಿಳೆಯರ ಭಾವನೆಗೆ ಈ ಸಿನಿಮಾ ಮೂಲಕ ಬಣ್ಣ ತುಂಬಬೇಕು ಎನ್ನುವ ಹಂಬಲದಿಂದ ರವಿಕೆ ಪ್ರಸಂಗ ಸಿನಿಮಾ ಮಾಡಲಾಗಿದೆ ಎಂದರು.
ಮದ್ಯಮ ವರ್ಗದ ಕುಟುಂಬವೊಂದು ಗ್ರಾಮೀಣ ಸೊಗಡಿನಲ್ಲಿ ಇರುವ ವಾತಾವರಣ, ಸ್ಥಳೀಯ ಸಂಸ್ಕೃತಿ, ಸಂಪುದಾಯದ ಜೊತೆಗೆ ಹಾಸ್ಯದ ಸ್ಪರ್ಷವನ್ನು ದಕ್ಷಿಣ ಕರ್ನಾಟಕದ ಭಾಷೆಯನ್ನೆ ವಿಭಿನ್ನವಾಗಿ ತೋರಿಸುವ ಮೂಲಕ ಭಾಷಾ ಹಾಗೂ ಆಹಾರ ಸಂಸ್ಕೃತಿಯನ್ನು ಕೂಡ “ರವಿಕೆ ಪಸಂಗ”ದಲ್ಲಿ ಸೂಕ್ಷ್ಮವಾಗಿ ತೋರಿಲಾಗಿದೆ. ಒಬ್ಬ ಟೈಲರ್ ಅಂಗಡಿಯಿಂದ ಆರಂಭವಾದ ಈ ರವಿಕೆ ಪ್ರಸಂಗ ಕೋರ್ಟ್ ಮೆಟ್ಟಿಲೇರಿದಾಗ ಅದಕ್ಕೆ ಸಮಾಜ ಹೆಣ್ಣನ್ನು ನೋಡುವ ಪರಿಯೇ ಈ ಚಿತ್ರದ ಎಳೆಯಾಗಿದೆ ಎಂದವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರದ ನಾಯಕಿ ಗೀತಾ ಭಾರತಿ ಭಟ್, ನಟ ರಘು ಪಾಂಡೇಶ್ವರ, ಕಥೆ ಮತ್ತು ಸಂಭಾಷಣೆ ಬರೆದ ಪಾವನಾ ಸಂತೋಷ್ ಉಪಸ್ಥಿತರಿದ್ದರು.