ಮುಂಬೈ: ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಕಲಂನೂರಿ ಶಾಸಕ ಸಂತೋಷ್ ಬಂಗಾರ್ ಅವರು ಹೇಳಿಕೆಯೊಂದನ್ನು ನೀಡಿ ಇದೀಗ ಭಾರೀ ವಿವಾದಕ್ಕೀಡಾಗಿದ್ದು, ಸಂತೋಷ್ ಬಂಗಾರ್ ಹೇಳಿಕೆಯ ವೀಡಿಯೋ ವೈರಲ್ ಆಗಿದೆ.
ವೀಡಿಯೋದಲ್ಲಿ ಏನಿದೆ..?: ಹಿಂಗೋಲಿ ಜಿಲ್ಲೆಯ ಜಿಲ್ಲಾ ಪರಿಷತ್ ಶಾಲೆಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶಾಸಕರು, ಮುಂದಿನ ಚುನಾವಣೆಯಲ್ಲಿ ನಿಮ್ಮ ಪೋಷಕರು ನನಗೆ ಮತ ಹಾಕದಿದ್ದರೆ ಎರಡು ದಿನ ಊಟ ಮಾಡಬೇಡಿ ಎಂದು ಹೇಳಿದ್ದಾರೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕೆಂದು ಪೋಷಕರ ಮುಂದೆಯೇ ಶಾಲಾ ಮಕ್ಕಳನ್ನು ಕೇಳಿದ್ದಾರೆ.
ಶಾಸಕರ ಹೇಳಿಕೆ ವಿರುದ್ಧ ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಎನ್ಸಿಪಿ ಕಿಡಿಕಾರಿದ್ದು, ಕ್ರಮಕ್ಕೆ ಒತ್ತಾಯಿಸಿವೆ. ಎನ್ಸಿಪಿ-ಎಸ್ಪಿ ವಕ್ತಾರ ಕ್ಲೈಡ್ ಕ್ರಾಸ್ಟೊ ಮಾತನಾಡಿ, ಬಂಗಾರ್ ಅವರು ಶಾಲಾ ಮಕ್ಕಳಿಗೆ ಹೇಳಿರುವುದು ಚುನಾವಣಾ ಆಯೋಗದ ನಿರ್ದೇಶನಕ್ಕೆ ವಿರುದ್ಧವಾಗಿದೆ. ಆದ್ದರಿಂದ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಂತೋಷ್ ಬಂಗಾರ್ ಇಂತಹ ವಿಚಿತ್ರ ಹೇಳಿಕೆಗಳನ್ನು ನೀಡುವುದು ಇದೇ ಮೊದಲಲ್ಲ. ಈ ಹಿಂದೆಯೇ ಅವರು ತಮ್ಮ ಆಘಾತಕಾರಿ ಹೇಳಿಕೆಗಳಿಂದಲೇ ಹೆಸರುವಾಸಿಯಾಗಿದ್ದಾರೆ.
ಕಳೆದ ತಿಂಗಳು 2024 ರ ಲೋಕಸಭಾ ಚುನಾವಣೆಯ ನಂತರ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗದಿದ್ದರೆ ನೇಣು ಹಾಕಿಕೊಳ್ಳುವುದಾಗಿ ಹೇಳಿದ್ದರು.