ಮೈಸೂರು: ಆಗಾಗ್ಗೆ ಕಾಣಿಸಿಕೊಂಡು ಜನ ಜಾನುವಾರುಗಳಿಗೆ ಉಪಟಳ ನೀಡುತ್ತಿದ್ದ ಚಿರತೆ ಅರಣ್ಯ ಸಿಬ್ಬಂದಿ ಇರಿಸಿದ್ದ ಬೋನಿಗೆ ಬಿದ್ದಿರುವ ಘಟನೆ ಜಿಲ್ಲೆಯ ರಾಂಪುರ ಹತ್ವಾಳ್ ಗ್ರಾಮದಲ್ಲಿ ನಡೆದಿದ್ದು, ರೈತರು ನೆಮ್ಮದಿಯುಸಿರು ಬಿಟ್ಟಿದ್ದಾರೆ.
ಕೆಲವು ದಿನಗಳಿಂದ ಚಿರತೆಯು ರಾಂಪುರ ಹತ್ವಾಳು ಗ್ರಾಮಗಳಲ್ಲಿ ಅಡ್ಡಾಡುತ್ತಿದ್ದುದಲ್ಲದೆ, ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿತ್ತು. ಇದರಿಂದ ಭಯಗೊಂಡ ರೈತರು ಜಾನುವಾರುಗಳನ್ನು ಮೇಯಲು ಬಿಡಲು ಭಯಪಡುವಂತಾಗಿತ್ತು. ಜತೆಗೆ ರೈತರು ಜಮೀನಿಗೆ ತೆರಳಲು ಹಿಂದೇಟು ಹಾಕುತ್ತಿದ್ದರು. ಅಲ್ಲಲ್ಲಿ ಚಿರತೆ ಅಡ್ಡಾಡುತ್ತಾ ಉಪಟಳ ನೀಡುತ್ತಿರುವ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದ ಹಿನ್ನಲೆಯಲ್ಲಿ ಅರಣ್ಯಾಧಿಕಾರಿಗಳು ಗ್ರಾಮದ ಚೌಡನಾಯ್ಕ ಎಂಬುವರ ಜಮೀನಲ್ಲಿ ಬೋನಿಟ್ಟು ಚಿರತೆಯ ಸೆರೆ ಕಾರ್ಯಾಚರಣೆ ಆರಂಭಿಸಿದ್ದರು.
ಇದೀಗ ಸೋಮವಾರ ಮುಂಜಾನೆ 3 ಗಂಟೆ ಸಮಯದಲ್ಲಿ ಚಿರತೆ ಬೋನಿನಲ್ಲಿ ಸೆರೆಯಾಗಿದೆ.
ಈ ಕುರಿತಂತೆ ಮಾತನಾಡಿರುವ ರೈತರು ಈ ಭಾಗದಲ್ಲಿ ಚಿರತೆಗಳ ಹಾವಳಿ ಜಾಸ್ತಿಯಾಗಿದ್ದು, ಈ ಸ್ಥಳದಲ್ಲಿ ಸೆರೆಸಿಕ್ಕ ಚಿರತೆಗಳ ಪೈಕಿ ಇದು ನಾಲ್ಕನೇ ಚಿರತೆಯಾಗಿದ್ದು ಇನ್ನೂ ಹಲವು ಚಿರತೆಗಳು ಈ ಭಾಗದಲ್ಲಿವೆ. ಇದರಿಂದ ನಾವು ಜಮೀನಿಗೆ ಮತ್ತು ಜಾನುವಾರಗಳನ್ನು ಮೇಯಿಸಲು ಭಯಪಡುವಂತಾಗಿದೆ. ಇನ್ನುಳಿದ ಚಿರತೆಗಳನ್ನು ಸೆರೆಹಿಡಿಯುವಂತೆ ಆಗ್ರಹಿಸಿದ್ದಾರೆ.