ಕಾಯಿಲೆಗಳು ಮನುಷ್ಯನಿಗೆ ಬಾರದೆ ಮರಕ್ಕೆ ಬರುತ್ತಾ? ಎಂಬುದು ಜನವಲಯದಲ್ಲಿರುವ ಮಾತಾಗಿದೆ. ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗೀಗ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಕಾಯಿಲೆಯಿಲ್ಲದೆ ಆರೋಗ್ಯವಾಗಿದ್ದೇವೆ ಎಂದು ಹೇಳುವುದೇ ಕಷ್ಟವಾಗುತ್ತಿದೆ.
ಇವತ್ತು ನಮ್ಮನ್ನು ಹತ್ತಾರು ಕಾಯಿಲೆಗಳು ಕಾಡುತ್ತಿದ್ದು ಅದರಲ್ಲಿ ಜಠರಕರುಳಿನ ರಕ್ತಸ್ರಾವ (ಗ್ಯಾಸ್ಟ್ರೋ ಇಂಟೆಸ್ಟೈನಲ್ ಬ್ಲೀಡ್) ಕೂಡ ಒಂದಾಗಿದ್ದು, ಈ ರೋಗಕ್ಕೆ ತುತ್ತಾದವರು ಹೆಚ್ಚಿನ ಪ್ರಮಾಣದಲ್ಲಿ ರಕ್ತ ವಾಂತಿ ಮಾಡಿಕೊಳ್ಳುವುದು ಕಂಡು ಬರುತ್ತದೆ. ಇದು ತೀರಾ ಅಪರೂಪದ್ದಾಗಿದ್ದರೂ ಕೆಲವೊಮ್ಮೆ ಇಂತಹ ಘಟನೆಗಳು ನಡೆದಾಗ ರೋಗಿಗೆ ಅಗತ್ಯ ಚಿಕಿತ್ಸೆ ನೀಡದೆ ಹೋದರೆ. ದೇಹದಿಂದ ರಕ್ತ ಹೊರ ಹೋದಷ್ಟು ರೋಗಿ ಅಸ್ವಸ್ತಗೊಂಡು ಸಾವಿಗೀಡಾದರೂ ಅಚ್ಚರಿಯಿಲ್ಲ.
ಜಠರಕರುಳಿನ ರಕ್ತಸ್ರಾವ ಸಮಸ್ಯೆಗೆ ತಕ್ಷಣಕ್ಕೆ ಪರಿಹಾರ ನೀಡಬೇಕಾಗುತ್ತದೆ. ಇದಕ್ಕೆ ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಕೇಂದ್ರಗಳಿರುವುದಿಲ್ಲ. ಕೆಲವೇ ಕೆಲವು ಆಸ್ಪತ್ರೆಗೆಳಲ್ಲಿ ಮಾತ್ರ ಚಿಕಿತ್ಸಾ ಘಟಕವಿದ್ದು ಸಕಾಲದಲ್ಲಿ ಚಿಕಿತ್ಸೆ ನೀಡಿದರೆ ರೋಗಿಗೆ ಬದುಕುಳಿಯಲು ಸಾಧ್ಯವಾಗಲಿದೆ.
ಒಂದು ವೇಳೆ ಅಪಾರ ಪ್ರಮಾಣದ ರಕ್ತದೊಂದಿಗೆ ವಿಪರೀತವಾಗಿ ವಾಂತಿಮಾಡಿಕೊಳ್ಳುವುದು ಕಂಡು ಬಂದರೆ ಅದನ್ನು ಜಠರಕರುಳಿನ ರಕ್ತಸ್ರಾವ ಎಂದೇ ಹೇಳಬಹುದು. ಇದು ತೀರ ಅಪರೂಪ. ಇಂತಹ ಘಟನೆಗಳು ವೈದ್ಯಕೀಯ ತುರ್ತು ಸಂದರ್ಭಗಳಾಗಿರುತ್ತವೆ ಎಂಬುದು ವೈದ್ಯರು ಅಭಿಪ್ರಾಯವಾಗಿದೆ.
ಇನ್ನು ಗ್ಯಾಸ್ಟ್ರೋಎಂಟೆರೊಲಜಿಸ್ಟ್ ಡಾ. ಸತೀಶ್ ರಾವ್ ಅವರು ಹೇಳುವಂತೆ ಪೋರ್ಟಲ್ ಹೈಪರ್ಟೆನ್ಷನ್, ಅಂದರೆ ರಕ್ತದಿಂದ ಉಂಟಾಗುವ ಒತ್ತಡದ ವೇಳೆಯಲ್ಲಿ ಯಕೃತ್ತಿನ (ಲಿವರ್) ರಕ್ತನಾಳಗಳ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡುವ ಕಾರಣ ಇಲ್ಲಿಯ ರಕ್ತನಾಳಗಳಲ್ಲೊಂದು ವೆರಾಸಿಸ್ ಎಂಬ ಸ್ಥಳದಲ್ಲಿ ಸ್ಪೋಟಗೊಳ್ಳುತ್ತದೆ.
ವೆರಾಸಿಸ್ ಎಂದರೆ ಗ್ಯಾಸ್ಟ್ರಿಕ್ ವ್ಯವಸ್ಥೆಯಲ್ಲಿ ಊದಿಕೊಂಡ ರಕ್ತನಾಳಗಳ ಗುಂಪು. ಸಾಮಾನ್ಯ ರಕ್ತದೊತ್ತಡದಲ್ಲಿ ಈ ರಕ್ತನಾಳಗಳು ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತವೆ, ಆದರೆ ರಕ್ತದೊತ್ತಡ ಅಧಿಕವಾದಾಗ ರಕ್ತನಾಳಗಳು ಪರ್ಯಾಯ ಸ್ಥಾನಕ್ಕಾಗಿ ಹುಡುಕಾಟ ನಡೆಸುತ್ತವೆ, ಆದರೆ ಸ್ಥಳವಿಲ್ಲದ ಕಾರಣ ಒಂದು ಅಥವಾ ಹೆಚ್ಚಿನ ನಾಳಗಳು ಸ್ಪೋಟಗೊಳ್ಳುತ್ತವೆ. ಸ್ಪೋಟಗೊಂಡ ರಕ್ತನಾಳಗಳಿಂದ ರಕ್ತವು ಹೊಟ್ಟೆಯೊಳಗೆ ಚಿಮ್ಮಲಾರಂಭಿಸುತ್ತದೆ. ಹೊಟ್ಟೆಯಲ್ಲಿ ಆಹಾರ ಮಾತ್ರ ಇರಬಹುದೇ ಹೊರತು ರಕ್ತವಲ್ಲ. ಇದರಿಂದಾಗಿ ರಕ್ತದ ವಾಂತಿ ಪ್ರಾರಂಭವಾಗುತ್ತದೆ ಎಂದು ಅವರು ಹೇಳುತ್ತಾರೆ.
ಮೇಲಿಂದ ಮೇಲೆ ರಕ್ತವನ್ನೇ ವಾಂತಿ ಮಾಡುವ ರೋಗಿ ಇದರಿಂದ ಸುಸ್ತಾಗಿ, ಅಸ್ವಸ್ಥಗೊಳ್ಳುತ್ತಾನೆ. ಈ ಸಂದರ್ಭ ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಿದ್ದೇ ಆದರೆ ಕ್ಯಾಮೆರಾ ಅಳವಡಿಸಿದ ಎಂಡೊಸ್ಕೋಪ್ ಪರೀಕ್ಷೆಯು ಸಾಮಾನ್ಯವಾಗಿ ರಕ್ತಸ್ರಾವದ ಸ್ಥಳವನ್ನು ಪತ್ತೆ ಹಚ್ಚಿ ತಕ್ಷಣವೇ ರಕ್ತಸ್ರಾವವನ್ನು ನಿಯಂತ್ರಿಸಲು ವೈದ್ಯರು ಕ್ರಮ ಕೈಗೊಳ್ಳುತ್ತಾರೆ.
ಈ ಹಿಂದೆ ರಕ್ತಸ್ರಾವವಾಗುವ ಸ್ಥಳದ ಮೇಲೆ ಅಂಟು ಹಾಕಿ ಅದನ್ನು ನಿಲ್ಲಿಸಲಾಗುತಿತ್ತು, ಆ ಚಿಕಿತ್ಸೆಯಲ್ಲಿ ಕೆಲವೊಮ್ಮೆ ಅಂಟು ಬಿಟ್ಟುಕೊಂಡ ಪರಿಣಾಮ ರಕ್ತಸ್ರಾವ ಮರುಕಳಿಸಿದ ಸಂದರ್ಭಗಳು ಇರುತ್ತಿದ್ದವು ಆದರೆ ಇದಕ್ಕೆ ಪರ್ಯಾಯವಾಗಿ ಈಗ ಅತ್ಯಾಧುನಿಕ ಮತ್ತು ನೂತನ ತಂತ್ರಜ್ಞಾನವಾದ ಪ್ಲ್ಯಾಟಿನಂ ನಿಂದ ತಯಾರಿಸಲಾದ ರಿಂಗನ್ನು ರಕ್ತಸ್ರಾವವಾಗುವ ಸ್ಥಳಕ್ಕೆ ಅಳವಡಿಸುವ ಪ್ರಯೋಗ ಮಾಡಲಾಗಿದ್ದು, ಈ ತಂತ್ರಜ್ಞಾನವು ರಕ್ತಸ್ರಾವವನ್ನು ತಕ್ಷಣ ನಿಲ್ಲಿಸುವುದಲ್ಲದೆ ಕ್ರಮೇಣ ಸ್ಪೋಟಗೊಂಡ ರಕ್ತನಾಳವು ಸರಿಹೋಗುವಂತೆ ಮಾಡುತ್ತದೆ.
ಈ ಚಿಕಿತ್ಸೆಯು ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದೊರೆಯುತ್ತಿದ್ದು, ತುರ್ತು ಚಿಕಿತ್ಸಾ ಘಟಕವು ಇಲ್ಲಿದೆ. ಆಸ್ಪತ್ರೆಯ ಮುಖ್ಯ ಗ್ಯಾಸ್ಟ್ರೋಎಂಟೆರೊಲಜಿಸ್ಟ್ ಡಾ. ಸತೀಶ್ ರಾವ್ ಹೇಳುವಂತೆ ನಮ್ಮ ಆಸ್ಪತ್ರೆಯಲ್ಲಿ ಈ ರೀತಿಯ ಹಲವಾರು ರೋಗಿಗಳೆಗೆ ಚಿಕಿತ್ಸೆ ನೀಡಿದ್ದೇವೆ ಹಾಗೂ ಇಲ್ಲಿಯವರೆಗೂ ಯಾರಿಗೂ ರಕ್ತಸ್ರಾವ ಮರುಕಳಿಸಿಲ್ಲ. ಈ ಹೊಸ ತಂತ್ರಜ್ಞಾನದ ಚಿಕಿತ್ಸೆಯು ಕಡಿಮೆ ವೆಚ್ಚದಾಗಿದ್ದು ಒಳ್ಳೆಯ ಫಲಿತಾಂಶದ ಜೊತೆ ಆಸ್ಪತ್ರೆಯಲ್ಲಿ ತಂಗಬೇಕಾದ ಕಾಲವನ್ನು ಕಡಿಮೆ ಮಾಡಲಿದೆ ಎನ್ನುತ್ತಾರೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ರಕ್ತವಾಂತಿಯಾಗುತ್ತಿದೆ ಎಂಬುದು ತಿಳಿದ ತಕ್ಷಣವೇ ಉದಾಸೀನ ತೋರದೆ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಅಗತ್ಯವಾಗಿದೆ. ಇಲ್ಲದೆ ಹೋದರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.