ಬೆಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಮ್ ಪಾರ್ಕ್ನಲ್ಲಿ ಪರಶುರಾಮನ ಕಂಚಿನ ಪ್ರತಿಮೆಯಲ್ಲಿ ಅರ್ಧ ಭಾಗ ಕಂಚು, ಇನ್ನೂ ಅರ್ಧ ಭಾಗ ಫೈಬರ್‌ನಲ್ಲಿ ನಿರ್ಮಾಣ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಈ ವಿಚಾರ ಇಂದು ವಿಧಾನ ಪರಿಷತ್ ಅಧಿವೇಶನದಲ್ಲಿ ಸುದ್ದು ಮಾಡಿತು. ಸಚಿವ ಶಿವರಾಜ್ ತಂಗಡಗಿ ಹೇಳಿಕೆಗೆ ಬಿಜೆಪಿ ಸದಸ್ಯರು ಆಕ್ರೋಶ ಹೊರಹಾಕಿದರು. ಕಾರ್ಕಳದಲ್ಲಿ ಪರಶುರಾಮ ವಿಗ್ರಹ ದೋಷ ಪೂರಿತವಾಗಿರುವ ಬಗ್ಗೆ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಪ್ರಸ್ತಾಪ ಮಾಡಿದರು. ಅಲ್ಲದೆ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಹಿಂದಿನ ಸರ್ಕಾರದಲ್ಲಾದ ಎಡವಟ್ಟನ್ನು ಸರ್ಕಾರ ಬಯಲು ಮಾಡಿದೆ ಎಂದರು.
ಈ ವೇಳೆ ಬಿಜೆಪಿ ಸದಸ್ಯರು ತನಿಖೆ ಮಾಡಿ, ಪೇಪರ್ನಲ್ಲಿರೋದನ್ನ ಹೇಳಬೇಡಿ ಎಂದರು. ಇದಕ್ಕೆ, ಇದು ನಮ್ಮ ಸರ್ಕಾರದಲ್ಲಿ ಆಗಿದ್ದಲ್ಲ, ಹಿಂದಿನ ಸರ್ಕಾರದಲ್ಲಿ ಆಗಿದ್ದು. ನ್ಯಾ.ನಾಗಮೋಹನ ದಾಸ್ ಸಮಿತಿ ಸ್ಥಳಕ್ಕೆ ಭೇಟಿ ನೀಡಿತ್ತು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ದೂರು ನೀಡಿದ್ದರು ಎಂದು ತಂಗಡಗಿ ಹೇಳಿದಾಗ ಪ್ರಕರಣದ ಬಗ್ಗೆ ತನಿಖೆ ಮಾಡಿ ಎಂದು ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಹೇಳಿದರು. ಪರಶುರಾಮ್ ಪ್ರತಿಮೆ ನಿರ್ಮಾಣದಲ್ಲಾದ ಅಕ್ರಮದ ಬಗ್ಗೆ ಸಿಐಡಿ ತನಿಖೆ ಮಾಡಿಸುತ್ತೇವೆ ಎಂದು ಶಿವರಾಜ್ ತಂಗಡಗಿ ಹೇಳಿದರು.