ಮೈಸೂರು: ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 50 ಪೈಸೆ ಹೆಚ್ಚಳ ಮಾಡಬೇಕು ಎಂದು ಸೆಸ್ಕ್ ಮಾಡಿದ್ದ ಪ್ರಸ್ತಾವನೆ ಮೇರೆಗೆ
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆಯಲ್ಲಿ ದರ ಏರಿಕೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಜಿ.ಪಂ ಸಭಾಗಂಣದಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಿಂದ ನಡೆದ ವಿಚಾರಣೆಯಲ್ಲಿ ಸಂಘ- ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರು, ಸೆಸ್ಕ್‌ನ ವಿದ್ಯುತ್ ದರ ಏರಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರಲ್ಲದೇ ಹಾಲಿ ಇರುವ ದರವನ್ನು ಇಳಿಕೆ ಮಾಡಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕರ ಮನವಿಗೆ ದನಿಗೂಡಿಸಿದ ಆಯೋಗದ ಅಧ್ಯಕ್ಷರು ಕೂಡ ಪ್ರತಿ ವರ್ಷ ವಿದ್ಯುತ್ ದರ ಏರಿಕೆಯ ಪ್ರಸ್ತಾವನೆ ಮಂಡಿಸುವುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಪರ್ಯಾಯ ಆದಾಯ ಮೂಲಗಳನ್ನು ಹುಡುಕುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಸಭೆಯ ಆರಂಭದಲ್ಲಿ ಸೆಸ್ಕ್‌ನ ಎಂಡಿ ಜಿ.ಶೀಲಾ ಮಾತನಾಡಿ, 2024-25ನೇ ಸಾಲಿನಲ್ಲಿ 7379.89 ಕೋಟಿ ರೂ. ವೆಚ್ಚವಾಗಲಿದ್ದು, ವಿದ್ಯುತ್ ಬಿಲ್‌ನಿಂದಾಗಿ 6940.34 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದೆ. 439.55ಕೋಟಿ ರೂ. ಸೆಸ್ಕ್‌ಗೆ ಹೊರೆಯಾಗುತ್ತಿದ್ದು, ಅನಿವಾರ್ಯವಾಗಿ ಪ್ರತಿ ಯೂನಿಟ್‌ಗೆ 50 ಪೈಸೆ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದರು.
ಬಳಿಕ ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಸೇರಿದಂತೆ ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಂದ ದರ ಹೆಚ್ಚಳ ಪ್ರಸ್ತಾಪ ಸಂಬಂಧ ಆಯೋಗದ ಅಧ್ಯಕ್ಷರು, ಅಹವಾಲು ಸ್ವೀಕರಿಸಿದರು. ಸಾಕಷ್ಟು ಮಂದಿ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸುವುದರೊಂದಿಗೆ ಇರುವ ದರ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು. ಅಲ್ಲದೇ ಸೆಸ್ಕ್‌ನಿಂದ ಗುಣಮಟ್ಟದ ಸೇವೆ ಸಿಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಎಲ್ಲರ ಅಭಿಪ್ರಾಯ ಅನಿಸಿಕೆಗಳನ್ನು ಆಲಿಸಿದ ಆಯೋಗದ ಅಧ್ಯಕ್ಷ ಪಿ.ರವಿಕುಮಾರ್, ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಆಯೋಗದ ಸದಸ್ಯ ಎಂ.ಡಿ.ರವಿ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ.ಲಿಂಗರಾಜು, ಅಶೋಕ್ ಇದ್ದರು.