ಕಾನ್ಪುರ: ಪ್ರಧಾನಿ ಮೋದಿ ಪ್ರಸ್ತಾಪಿಸುತ್ತಿರುವ ರಾಮರಾಜ್ಯದಲ್ಲಿ ದಲಿತರು ಹಾಗು ಇತರೆ ಹಿಂದುಳಿದ ವರ್ಗದವರಿಗೆ ಯಾವುದೇ ಸ್ಥಾನಮಾನ ಸಿಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾನ್ಪುರದಲ್ಲಿ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಮಾತನಾಡಿದ ಅವರು, ದೇಶದ ಜನಸಂಖ್ಯೆಯ ೯೦% ಇರುವ ದಲಿತರು, ಬುಡಕಟ್ಟು ಹಾಗು ಹಿಂದುಳಿದವರಿಗೆ ಬೇಕಾದಷ್ಟು ಉದ್ಯೋಗ ಸೃಷ್ಟಿ ಮಾಡದೆ ಮೋದಿ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಿಮಗೆ ಉದ್ಯೋಗ ನೀಡಲು ಪ್ರಧಾನಿ ಮೋದಿಗೆ ಇಷ್ಟವಿಲ್ಲ ಎಂದ ಅವರು, ದೇಶದಲ್ಲಿ ನಡೆಯುತ್ತಿರುವ ತಾರತಮ್ಯಕ್ಕೆ ಉದಾಹರಣೆಯಾಗಿ ರಾಮಮಂದಿರ ಪ್ರಾಣಪ್ರತಿಸ್ಠೆಯ ಸಂದರ್ಭವನ್ನು ನೆನಪಿಸುತ್ತ, ಆ ಸಮಾರಂಭದಲ್ಲಿ ದಲಿತರು ಹಾಗು ಬುಡಕಟ್ಟು ಜನಾಂಗದವರಿಗೆ ಜಾಗವಿರಲಿಲ್ಲ. ಬುಡಕಟ್ಟಿಗೆ ಸೇರಿದ ಕಾರಣಕ್ಕೆ ರಾಷ್ಟ್ರಪತಿಗಳಿಗೂ ಆಹ್ವಾನವಿರಲಿಲ್ಲ ಹಾಗು ಮಾಜಿ ರಾಷ್ಟ್ರಪತಿಗಳಿಗೆ ಪ್ರವೇಶವಿರಲಿಲ್ಲ ಎಂದು ಟೀಕಿಸಿದ್ದಾರೆ.
ಹಿಂದುಳಿದವರ ಆರ್ಥಿಕ ಸ್ಥಿತಿಯನ್ನು ತಿಳಿಯಲು ಹಾಗು ಅವರ ಯೋಗಕ್ಷೇಮವನ್ನು ಖಚಿತಪಡಿಸಲು ಜಾತಿಗಣತಿ ಅಗತ್ಯ ಎಂದು ರಾಹುಲ್ ಗಾಂಧಿ ಹೇಳಿದರು.