ಕಾವೇರಿ ನದಿಯಲ್ಲಿ ಸ್ಫೋಟಕ ಬಳಸಿ ಮೀನುಗಾರಿಕೆ… ಕ್ರಮ ಯಾವಾಗ?

ಮೈಸೂರು: ಬೇಸಿಗೆ ಆರಂಭದಲ್ಲಿಯೇ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತಿದ್ದು. ಮುಂದಿನ ನಡು ಬೇಸಿಗೆಯ ದಿನಗಳನ್ನು ಹೇಗಪ್ಪಾ ಕಳೆಯೋದು ಎಂದು ಜನ ಯೋಚಿಸುತ್ತಿದ್ದರೆ, ಇನ್ನೊಂದೆಡೆ ನದಿಯಲ್ಲಿ ನೀರು ಕಡಿಮೆಯಾಗಿದ್ದು ಒಳ್ಳೆದಾಯಿತು ಎನ್ನುತ್ತಾ ಸಿಡಿ ಮದ್ದು ಸಿಡಿಸಿ ಮೀನು ಹಿಡಿಯುವ ಕೆಲಸಕ್ಕೆ ಕೆಲವರು ಮುಂದಾಗಿರುವುದು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಕಾವೇರಿ ನದಿ ವ್ಯಾಪ್ತಿಯಲ್ಲಿ ಕಂಡು ಬರುತ್ತಿದೆ.

ಕಿಡಿಗೇಡಿಗಳು ರಾತ್ರಿ ವೇಳೆಯಲ್ಲಿ ಯಾರೂ ಇಲ್ಲದ ಸಂದರ್ಭ ನೀರು ನಿಲ್ಲುವ ಪ್ರದೇಶಗಳಲ್ಲಿ ಸಿಡಿಮದ್ದು ಸಿಡಿಸಿ ಮೀನುಗಳ ಮಾರಣ ಹೋಮ ಮಾಡುತ್ತಿದ್ದು, ಮದ್ದಿನ ಸ್ಪೋಟಕ್ಕೆ ಸಿಲುಕಿ ಸತ್ತ ಮೀನುಗಳು ನೀರಿನಲ್ಲಿ ತೇಲಿ ಬರುತ್ತಿದ್ದು, ಅಕ್ರಮವಾಗಿ ಸಿಡಿ ಮದ್ದು ಬಳಸಿ ಮೀನು ಹಿಡಿಯುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ವ್ಯಾಪ್ತಿಯ ಜನರು ಒತ್ತಾಯಿಸುತ್ತಿದ್ದಾರೆ.

ಹಾಗೆನೋಡಿದರೆ ನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆಯೇ ನದಿಯಲ್ಲಿರುವ ಮೀನುಗಳನ್ನು ಹಿಡಿಯಲು ಸಾರ್ವಜನಿಕರು ಮುಂದಾಗುವುದು ಇವತ್ತು ನಿನ್ನೆಯದಲ್ಲ. ಮೊದಲಿನಿಂದಲೂ ನಡೆಯುತ್ತಲೇ ಇದೆ. ಆದರೆ ಕೆಲವು ದುಷ್ಕರ್ಮಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೀರಿನಲ್ಲಿ ಸ್ಪೋಟಕ ಸಿಡಿಸಿ ಮೀನುಗಳನ್ನು ಹಿಡಿಯುತ್ತಿರುವುದರಿಂದ ಒಂದು ಕಡೆ ಮೀನುಗಳ ಮಾರಣ ಹೋಮ ನಡೆಯುತ್ತಿದ್ದರೆ, ಮತ್ತೊಂದೆಡೆ ಅಪಾಯದ ಭಯವೂ ಸ್ಥಳೀಯರನ್ನು ಕಾಡುತ್ತಿದೆ. ಈ ವ್ಯಾಪ್ತಿಯಲ್ಲಿ ಸೇತುವೆ, ಅಣೆಕಟ್ಟೆಗಳು ಇರುವುದರಿಂದ ಸಿಡಿ ಮದ್ದಿನ ಸ್ಪೋಟಕ್ಕೆ ಅಪಾಯವುಂಟಾಗುವ ಭೀತಿಯನ್ನು ಅವರು ಹೊರ ಹಾಕುತ್ತಿದ್ದಾರೆ.

ಸಿಡಿಮದ್ದಿನಿಂದ ಜಲಚರಗಳ ಮಾರಣ ಹೋಮ

ಚುಂಚನಕಟ್ಟೆ ಗ್ರಾಮಕ್ಕೆ ಹೊಂದಿಕೊಂಡಂತೆ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಅಕ್ರಮವಾಗಿ ನಿತ್ಯ ಸ್ಫೋಟಕ ಸಿಡಿಸಿ ರಾಜಾರೋಷವಾಗಿ ಮೀನು ಹಿಡಿಯಲಾಗುತಿದ್ದು, ಇದರಿಂದ ಸಣ್ಣ ಮರಿ ಮೀನು ಸೇರಿದಂತೆ ನಾನಾ ರೀತಿಯ ಜಲಚರಗಳು ಬಲಿಯಾಗುತ್ತಿವೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಕಾವೇರಿ ನದಿಯಲ್ಲಿ ಇದೀಗ ನೀರಿನ ಪ್ರಮಾಣ ಇಳಿಮುಖಗೊಂಡಿರುವ ಕಾರಣ ಮೀನು ಹಿಡಿಯುವ ದಂಧೆಕೋರರಿಗೆ ಹಣವೇ ಮುಖ್ಯವಾಗಿರುವುದರಿಂದ ಸ್ಪೋಟಕ ವಸ್ತುಗಳನ್ನು ಬಳಸಿ ಮೀನು ಹಿಡಿಯುತ್ತಿದ್ದು, ತಮ್ಮ ಬೊಕ್ಕಸ ತುಂಬಿಸಿಕೊಳ್ಳುತ್ತಿದ್ದಾರೆ.

ಹಗಲು ರಾತ್ರಿ ಎನ್ನದೆ ನದಿಯ ಒಡಲಿನಲ್ಲಿ ಬೆಚ್ಚಿ ಬೀಳಿಸುವ ಸಿಡಿಮದ್ದುಗಳ ಸ್ಪೋಟದ ಸದ್ದು ಕೇಳಿ ಬರುತ್ತಿದ್ದು, ಮೀನುಗಳನ್ನು ಹಿಡಿದು ಸಾರ್ವಜನಿಕರಿಗೆ, ಹೋಟೆಲ್ ಸೇರಿದಂತೆ ಹೊರ ಜಿಲ್ಲಾ ಕೇಂದ್ರಗಳಿಗೆ ಐಸ್‌ ಬಾಕ್ಸ್‌ಗಳಲ್ಲಿ ತುಂಬಿ ಕಳುಹಿಸುವ ಮೂಲಕ ವಹಿವಾಟು ನಡೆಸುತ್ತಿದ್ದಾರೆ. ಈ ಬಗ್ಗೆ ಮೀನುಗಾರಿಕೆ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳಾಗಲಿ ಅಥವಾ ಮೀನು ಸಹಕಾರ ಸಂಘವಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ.

ಅಣೆಕಟ್ಟೆಗಳು, ದೇಗುಲಕ್ಕೆ ಹಾನಿಯಾಗುವ ಭಯ

ಇನ್ನು ಸಿಡಿಮದ್ದಿನ ಸ್ಫೋಟಕ್ಕೆ ಸಣ್ಣ ಮೀನಿನಿಂದ ಹಿಡಿದು ದೊಡ್ಡ ಮೀನುಗಳ ತನಕ ಸಾಯುತ್ತಿವೆ. ಇಷ್ಟೇ ಅಲ್ಲದೆ ನದಿ ಪಾತ್ರದಲ್ಲಿರುವ ಆಮೆ, ಕಪ್ಪೆ, ನೀರಾವು, ನೀರುನಾಯಿ, ಏಡಿ, ಸಿಗಡಿ ಸೇರಿದಂತೆ ವಿವಿಧ ರೀತಿಯ ಜಲಚರಗಳು ಸಾವನ್ನಪ್ಪುತ್ತಿವೆ. ಇದರಿಂದ ಮೀನಿನ ಸಂತತಿ ನಶಿಸುವ ಆತಂಕ ಎದುರಾಗಿದೆ. ಅಲ್ಲದೆ ಆಹಾರ ಅರಸಿ ಹಾಗೂ ವಂಶಾಭಿವೃದ್ಧಿಗೆಂದು ದೇಶದ ಹಲವು ಭಾಗಗಳಿಂದ ಬಂದು ಗೂಡು ಕಟ್ಟಿ ವಾಸಿಸುವ ಪಕ್ಷಿಗಳು, ಪ್ರಾಣಿಗಳು ಶಬ್ದಕ್ಕೆ ಹೆದರಿ ಓಡಿ ಹೋಗುತ್ತಿವೆ.

ಇದೆಲ್ಲದರ ನಡುವೆ ಕಾವೇರಿ ನದಿಗೆ ಹೊಂದಿಕೊಂಡತೆ ಸೇತುವೆಗಳು, ಅಣೆಕಟ್ಟೆಗಳು, ದೇವಾಲಯ ಸೇರಿದಂತೆ ಹಲವು ಕಟ್ಟಡಗಳಿದ್ದು, ಅವುಗಳಿಗೆ ಅಪಾಯ ಎದುರಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಒಟ್ಟಾರೆ ಹೇಳಬೇಕೆಂದರೆ ಮೀನು ಹಿಡಿಯಲು ಸ್ಪೋಟಕಗಳನ್ನು ಬಳಸುವುದೇ ಅಪರಾಧವಾಗಿದೆ. ಅದರಲ್ಲೂ ಅಣೆಕಟ್ಟೆ ಮತ್ತು ಐತಿಹಾಸಿಕ ದೇಗುಲವಿರುವ ಈ ಪ್ರದೇಶದಲ್ಲಿ ಇಂತಹ ಕೃತ್ಯವನ್ನು ತಡೆಯಲೇ ಬೇಕಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

Font Awesome Icons

Leave a Reply

Your email address will not be published. Required fields are marked *