ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ: ಸಚಿವ ಈಶ್ವರ ಖಂಡ್ರೆ

ಬೀದರ್:‌ ದಿನೇ ದಿನೇ ಬೇಸಿಗೆ ಹೆಚ್ಚಾಗುತ್ತಿರುವುದರಿಂದ ಬೀದರ ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆಗಳಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕೆಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.

ಅವರು ಶನಿವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಹಾಗೂ ಇತರೆ ವಿಷಯಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ʼಬೋರವೆಲ್ ಮತ್ತು ತೆರೆದ ಬಾವಿಗಳಲ್ಲಿ ನೀರು ಬತ್ತಿಹೋಗಿ ಹಾಹಾಕಾರ ಎಲ್ಲಾ ಕಡೆ ಈ ಬೇಸಿಗೆಯಲ್ಲಿ ಕಂಡು ಬರುತ್ತದೆ. ವಿಶೇಷವಾಗಿ ಔರಾದ ಮತ್ತು ಭಾಲ್ಕಿಯಲ್ಲಿ ನೀರಿನ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತದೆ. ಹಾಗಾಗಿ ಜನರಿಗೆ 24 ತಾಸು ನೀರು ಕೊಡಬೇಕು. ನನ್ನ ಕ್ಷೇತ್ರದಲ್ಲಿ ಮೊನ್ನೆ ಹೆಣ್ಣುಮಕ್ಕಳು ಸೈಕಲ್ ಮೂಲಕ ಒಂದು ಕಿ.ಮೀ. ದೂರದಿಂದ ನೀರು ತರುತ್ತಿದ್ದೇವೆ ಎಂದು ಹೇಳಿದರು. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಎಲ್ಲೂ ಕಂಡು ಬರಬಾರದುʼ ಎಂದು ಹೇಳಿದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ನಗರಸಭೆ, ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಪುರಸಭೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಣೆ ಮಾಡಬೇಕು ಮತ್ತು ಜಾನುವಾರುಗಳಿಗೆ ಈ ಬೇಸಿಗೆಯಲ್ಲಿ ಮೇವಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಸಚಿವರು ಪಶು ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು.

ಈ ಹಿಂದೆ ಕೆಲವು ಕಡೆ ಕಲುಷಿತ ನೀರು ಕುಡಿದು ದುರ್ಘಟನೆಯಾಗಿರುವುದನ್ನು ನೆನಪಿಸಿದ ಸಚಿವರು, ಕುಡಿಯುವ ನೀರಿನ ಸಮಸ್ಯೆಗಳಾಗದಂತೆ ಸಹಾಯವಾಣಿ ತೆರೆದು ಅದಕ್ಕೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಎಂದು ಸೂಚಿಸಿದರು.

ಬಿಸಿಲಿನ ತಾಪಮಾನ ಹೆಚ್ಚಾದರೆ ಮಾಹಿತಿ ನೀಡಬೇಕು. ಜನರಿಗೆ ಡಿ ಹೈಡ್ರೆಟ್ ಆಗದಂತೆ ಆಸ್ಪತ್ರೆಗಳಲ್ಲಿ ಓ.ಆರ್.ಎಸ್. ಪಾಕೇಟಗಳನ್ನು ಇಡಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಾರ್ಚ್ 7 ಕ್ಕೆ ಮುಖ್ಯಮಂತ್ರಿಗಳು ಬೀದರ ಜಿಲ್ಲೆಗೆ ಬರುತ್ತಿದ್ದು ಗ್ಯಾರಂಟಿ ಯೋಜನೆಗಳ ಸಮಾವೇಶ ಹಾಗೂ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಆರ್ಥಿಕ ವರ್ಷ ಮುಗಿಲಿಕ್ಕೆ ಬಂದಿದ್ದು, ಗ್ಯಾರಂಟಿ ಯೋಜನೆಗಳ ಜೊತೆಗೆ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯಬೇಕು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಹೋದ ಸಲ 3 ಸಾವಿರ ಕೋಟಿ ಹಣ ನೀಡಲಾಗಿತ್ತು ಈ ವರ್ಷ 5 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದೆವೆ. ನೀರಾವರಿ, ಶಿಕ್ಷಣ, ಆರೋಗ್ಯ, ಕೌಶಲ್ಯ ಅಭಿವೃದ್ಧಿ ಕೆಲಸ ಮತ್ತು ಕಾಮಗಾರಿಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದು ಎಲ್ಲರೂ ಹಗಲಿರುಳು ಶ್ರಮಿಸುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಹೇಳಿದರು.

Font Awesome Icons

Leave a Reply

Your email address will not be published. Required fields are marked *