ದೆಹಲಿ ಸರ್ಕಾರದ ಬಜೆಟ್: ಶಿಕ್ಷಣ ಮತ್ತು ಮಹಿಳೆಯರ ಮೇಲೆ ಒತ್ತು

ನವದೆಹಲಿ: ದೆಹಲಿ ಸರ್ಕಾರದ ಹಣಕಾಸು ಸಚಿವೆ ಆತಿಶಿ  ಅವರು ಇಂದು ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದು, ಬಜೆಟ್​ನಲ್ಲಿ ಶಿಕ್ಷಣ ಮತ್ತು ಮಹಿಳೆಯರ ಮೇಲೆ ಒತ್ತುಕೊಡಲಾಗಿದೆ.

76,000 ಕೋಟಿ ರೂ ಗಾತ್ರದ ಬಜೆಟ್​ನಲ್ಲಿ ಶೇ. 21ಕ್ಕೂ ಹೆಚ್ಚು ಹಣವನ್ನು ಶಿಕ್ಷಣಕ್ಕೆ ನೀಡಲಾಗಿದೆ. ಇದರ ಜೊತೆಗೆ, ಬಜೆಟ್​ನಲ್ಲಿ ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಯನ್ನು ಘೋಷಿಸಲಾಗಿದೆ.

ಈ ಯೋಜನೆಯಲ್ಲಿ 18 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಎಲ್ಲಾ ಮಹಿಳೆಯರಿಗೂ ತಿಂಗಳಿಗೆ 1,000 ರೂ ನೀಡಲಾಗುತ್ತದೆ. ಏಪ್ರಿಲ್ 1ರಿಂದ ಇದು ಜಾರಿಗೆ ಬರಲಿದೆ.

‘ಕೇಜ್ರಿವಾಲ್ ಸರ್ಕಾರ 18 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಸಿನ ಪ್ರತಿಯೊಬ್ಬ ಮಹಿಳೆಗೂ ಮಾಸಿಕ 1,000 ರೂ ನೀಡುತ್ತದೆ. ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಈ ಕೊಡುಗೆ ಸಿಗುತ್ತದೆ,’ ಎಂದು ಆತಿಶಿ ತಮ್ಮ ಚೊಚ್ಚಲ ಬಜೆಟ್​ನಲ್ಲಿ ತಿಳಿಸಿದ್ದಾರೆ.

ಹಣಕಾಸು ಸಚಿವೆ ಆತಿಶಿ ತಮ್ಮ 76,000 ಕೋಟಿ ರೂ ದಾಖಲೆಯ ಬಜೆಟ್​ನಲ್ಲಿ 16,396 ಕೋಟಿ ರೂವನ್ನು ಶಿಕ್ಷಣ ವಲಯಕ್ಕೆ ಕೊಟ್ಟಿದ್ದಾರೆ. 8,685 ಕೋಟಿ ರೂ ಅನ್ನು ಆರೋಗ್ಯ ಕ್ಷೇತ್ರಕ್ಕೆ ಕೊಟ್ಟಿದ್ದಾರೆ. ಕೇಜ್ರಿವಾಲ್ ಸರ್ಕಾರದ ಟ್ರೇಡ್ಮಾರ್ಕ್ ಎನಿಸಿರುವ ಮೊಹಲ್ಲಾ ಕ್ಲಿನಿಕ್​ಗಳಿಗೆ 212 ಕೋಟಿ ರೂ ಕೊಡಲಾಗಿದೆ.

ಹಾಗೆಯೇ, ವಿದ್ಯುತ್ ಬಿಲ್ ಸಬ್ಸಿಡಿ ಮುಂದುವರಿಯುತ್ತಿದೆ. 2023ರಲ್ಲಿ 3.41 ಕೋಟಿ ಗ್ರಾಹಕರಿಗೆ ಶೂನ್ಯ ವಿದ್ಯುತ್ ಬಿಲ್ ನೀಡಲಾಗಿತ್ತು. ಅದು ಮುಂದುವರಿಯಲಿದೆ ಎಂದು ಆತಿಶಿ ಸ್ಪಷ್ಟಪಡಿಸಿದ್ದಾರೆ.

ಶಿಕ್ಷಣಕ್ಕೆ: 16,400 ಕೋಟಿ ರೂ
ಆರೋಗ್ಯ ಕ್ಷೇತ್ರ: 8,685 ಕೋಟಿ ರೂ
ದೆಹಲಿ ಜಲ ಮಂಡಳಿ: 7,195 ಕೋಟಿ ರೂ
ಸಾಮಾಜಿಕ ಕಲ್ಯಾಣ ಇಲಾಖೆ, ಎಸ್​ಸಿ ಎಸ್​ಟಿ ಒಬಿಸಿ ಕಲ್ಯಾಣ ಇಲಾಖೆ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳಿಗೆ 6,216 ಕೋಟಿ ರೂ ಕೊಡಲಾಗಿದೆ.
ಸಾರ್ವಜನಿಕ ಸಾರಿಗೆ: 5,702 ಕೋಟಿ ರೂ

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ದೆಹಲಿಯಲ್ಲಿ ಪ್ರಸ್ತುತಪಡಿಸಿರುವ 10ನೇ ಬಜೆಟ್ ಇದಾಗಿದೆ.

Font Awesome Icons

Leave a Reply

Your email address will not be published. Required fields are marked *