ಕಾಲ ಬದಲಾಗಿದೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ಸಾಧನೆಗಳನ್ನು ಮಾಡುತ್ತಾ ಪುರುಷರಿಗೆ ಸರಿಸಮಾನಾಗಿ ನಿಂತಿದ್ದಾರೆ. ಆದರೂ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಹೀಗೆ ಹತ್ತಾರು ಸಮಸ್ಯೆಗಳಿಂದ ಮಹಿಳೆ ಮುಕ್ತವಾಗಿಲ್ಲ. ಪುರುಷ ಸಮಾಜದಲ್ಲಿ ಒಂದಲ್ಲ ಒಂದು ವಿಚಾರದಲ್ಲಿ ಶೋಷಣೆಗಳು ನಡೆಯುತ್ತಲೇ ಇದ್ದು, ಇದೆಲ್ಲದಕ್ಕೂ ಇತಿಶ್ರೀ ಹಾಡದ ಹೊರತು ಮಹಿಳಾ ದಿನಾಚರಣೆಗೆ ಅರ್ಥ ಬರುವುದಿಲ್ಲವೇನೋ?
ಇವತ್ತು ಸಂಸಾರವನ್ನು ನಡೆಸುವ ಜವಬ್ದಾರಿಯನ್ನು ಗಂಡಸಿಗಿಂತಲೂ ಹೆಚ್ಚಾಗಿ ಹೆಂಗಸರೇ ವಹಿಸಿಕೊಂಡು, ನಿರ್ವಹಿಸಿಕೊಂಡು ಹೋಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಯಾವ ಕೆಲಸವೂ ಆಗಲ್ಲ ಎಂಬುದು ಇಲ್ಲವೇ ಇಲ್ಲ ಎಂಬುದನ್ನು ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ಹೀಗಾಗಿ ಪುರುಷರಿಗೆ ಸರಿಸಮಾನರಾಗಿ ಬೆಳೆಯುತ್ತಿದ್ದಾರೆ. ಅಷ್ಟೇ ಅಲ್ಲ ಮನೆಯ ಒಳಗೂ ಹೊರಗೂ ಕೆಲಸ ಮಾಡುವುದರೊಂದಿಗೆ ಸಮಾಜದಲ್ಲೊಂದು ಶಕ್ತಿಯಾಗಿದ್ದಾರೆ.
ಮೊದಲೆಲ್ಲಾ ಗಂಡ ದುಡಿದು ತಂದಿದ್ದನ್ನು ಬೇಯಿಸಿ ಹಾಕುತ್ತಾ ಮಕ್ಕಳನ್ನು ನೋಡಿಕೊಂಡಿದ್ದರಾಯಿತು ಎಂಬ ಮನೋಭಾವ ಮಹಿಳೆಯರದ್ದಾಗಿತ್ತು. ಈಗ ಹಾಗಿಲ್ಲ. ಎಲ್ಲವೂ ಬದಲಾಗಿದೆ. ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಮನೆಯಲ್ಲಿ ಕುಳಿತು ಟೈಲರಿಂಗ್‌ನಂತಹ ಕೈಗಾರಿಕೆಗಳನ್ನು ಕೆಲವರು ಮಾಡಿದರೆ, ಇನ್ನು ಕೆಲವರು ಬ್ಯೂಟಿಪಾರ್ಲರ್, ವ್ಯಾಪಾರ, ಹೈನುಗಾರಿಕೆ, ಇನ್ನಿತರ ಉದ್ಯಮಗಳತ್ತ ಆಸಕ್ತಿ ವಹಿಸಿ ದುಡಿಯುತ್ತಾ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಕುಟುಂಬ ನಿರ್ವಹಣೆಯ ಜವಬ್ದಾರಿಯೊಂದಿಗೆ ತನ್ನ ಉದ್ಯೋಗವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.
ಹಿಂದಿನ ಕಾಲದಲ್ಲಿ ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಸೇರಿಸಿ ಹೊಟ್ಟೆಪಾಡು ಕಳೆಯುತ್ತಿದ್ದರು. ಈಗ ಹಾಗಿಲ್ಲ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ ಅವರಿಗೊಂದು ಬದುಕು ನೀಡಬೇಕು ಎಂಬ ಕಲ್ಪನೆ ಬಂದಿದೆ. ಹಾಗಾಗಿ ಬಾಲ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದೆ.
ಅಡುಗೆ ಮನೆಗಷ್ಟೇ ಸೀಮಿತರಾಗಿದ್ದ ಮಹಿಳೆಯರು ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳು ಅಸ್ಥಿತ್ವಕ್ಕೆ ಬಂದ ನಂತರ ಆರ್ಥಿಕವಾಗಿ ಚೇತರಿಸಿಕೊಂಡಿಲ್ಲದೆ, ಬ್ಯಾಂಕ್ ವ್ಯವಹಾರ ಸೇರಿದಂತೆ ರಾಜಕೀಯವಾಗಿಯೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇದೊಂದು ಉತ್ತಮ ಬೆಳವಣಿಗೆಯಾಗಿದೆ. ದೇಶ ಅಭಿವೃದ್ಧಿಯಾಗಬೇಕಾದರೆ ಮೊದಲಿಗೆ ಹಳ್ಳಿಗಳು ಉದ್ಧಾರವಾಗಬೇಕು. ಹಳ್ಳಿಗಳು ಉದ್ಧಾರವಾಗಬೇಕಾದರೆ ಅಲ್ಲಿನ ಮಹಿಳೆಯರು ಸುಶಿಕ್ಷಿತರಾಗಬೇಕು, ಆರ್ಥಿಕವಾಗಿ ಸದೃಢರಾಗಬೇಕು.