ಮುಂಬೈ: ಹಿಂದಿ ಬಿಗ್ಬಾಸ್ ವಿಜೇತ ಮುನಾವರ್ ಫಾರೂಖಿಯನ್ನು ಮುಂಬೈ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದಾರೆ. ಮುಂಬೈನಲ್ಲಿನ ಹುಕ್ಕಾ ಬಾರ್, ಹುಕ್ಕಾ ಪಾಪ್ಯೂಲರ್ ಮೇಲೆ ತಡರಾತ್ರಿ ದಾಳಿ ನಡೆಸಿದ್ದ ಪೊಲೀಸರು ಬಿಗ್ಬಾಸ್ ವಿಜೇತ ಮುನಾವರ್ ಫಾರೂಖಿ ಸೇರಿದಂತೆ ಇನ್ನೂ 14 ಮಂದಿಯನ್ನು ಬಂಧಿಸಿದ್ದರು.
ಎಲ್ಲರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ.
ವರದಿಯ ಪ್ರಕಾರ , ಮುಂಬೈ ಪೊಲೀಸ್ ಸಮಾಜ ಸೇವಾ ಶಾಖೆಯು ʻಬೋರಾ ಬಜಾರ್ʼನಲ್ಲಿರುವ ʻಸಬಲನ್ ಹುಕ್ಕಾ ಬಾರ್ʼ ಮೇಲೆ ದಾಳಿ ನಡೆಸಿತ್ತು. ʻತಂಬಾಕು ಆಧಾರಿತ ಹುಕ್ಕಾ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗಿತ್ತು. ಈ ಮಾಹಿತಿಯ ಮೇರೆಗೆ ನಮ್ಮ ತಂಡವು ದಾಳಿ ಮಾಡಿದೆ. ದಾಳಿ ವೇಳೆ 4,400 ರೂ. ನಗದು ಹಾಗೂ 13,500 ಮೌಲ್ಯದ ಒಂಬತ್ತು ಹುಕ್ಕಾ ಪಾಟ್ಗಳನ್ನು ವಶಪಡಿಸಿಕೊಳ್ಳಲಾಗಿದೆʼʼ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ.
ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಇನ್ನೂ ಸ್ಥಳದಲ್ಲಿ ಶೋಧ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಮಾತ್ರವಲ್ಲ ದಾಳಿಯ ಸಮಯದಲ್ಲಿ, ಸ್ಟ್ಯಾಂಡ್-ಅಪ್ ಕಮೆಡಿಯನ್ ಮುನಾವರ್ ಮತ್ತು ಇತರರು ಹುಕ್ಕಾಗಳನ್ನು ಸೇದುತ್ತಿದ್ದರು. ಆ ವಿಡಿಯೊ ಕೂಡ ನಮ್ಮಲ್ಲಿ ಇದೆ. ಫಾರೂಕಿ ಮತ್ತು ಇತರರನ್ನು ಮೊದಲು ಬಂಧಿಸಿದ್ದೇವು. ಆ ಬಳಿಕ ಕಾನೂನು ಪ್ರಕಾರ ರಿಲೀಸ್ ಮಾಡಲು ಅನುಮತಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.