ದೆಹಲಿ: ಬೈಜೂಸ್ ಶಿಕ್ಷಣ ಸಂಸ್ಥೆ 2022ರಿಂದಲೂ ನಿರಂತರವಾಗಿ ಹಲವು ಹಂತಗಳಲ್ಲಿ ಉದ್ಯೋಗ ಕಡಿತ ಮಾಡುತ್ತಿದೆ.
ಆನ್ಲೈನ್ ಕೋಚಿಂಗ್ ಹಾಗೂ ಟ್ಯೂಷನ್ ಒದಗಿಸುವ ಮೂಲಕ ಫೇಮಸ್ ಆಗಿದ್ದ ಬೈಜೂಸ್ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಸಂಸ್ಥೆ ಉದ್ಯೋಗಿಗಳಿಗೆ ಸ್ಯಾಲರಿ ನೀಡುವುದಕ್ಕೂ ಪರದಾಡುತ್ತಿದ್ದು, ಫೋನ್ ಮೂಲಕವೇ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಕೆಲಸ ಮಾಡುತ್ತಿದೆ ಎಂದು ವರದಿ ಆಗಿದೆ. ಈ ಬಗ್ಗೆ ಬೈಜೂಸ್ ಉದ್ಯೋಗಿಗಳೆ ಅಳಲು ತೋಡಿಕೊಂಡಿದ್ದಾರೆ.
ಬೈಜೂಸ್ ಎಜುಟೆಕ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ರಾಹುಲ್ ಎಂಬುವವರು ತಮ್ಮ ಕುಟುಂಬ ಸದಸ್ಯರೊಬ್ಬರಿಗೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾರ್ಚ್ ಮಧ್ಯದಲ್ಲಿ ರಜೆ ತೆಗೆದುಕೊಂಡು ಊರಿಗೆ ಹೋಗಿದ್ದರು. ಆದರೆ ಮಾರ್ಚ್ 31 ರಂದು ಇವರಿಗೆ ಕಂಪನಿಯ ಹೆಚ್‌ಆರ್ ಕಡೆಯಿಂದ ಕರೆ ಬಂದಿದ್ದು, ಸಂಸ್ಥೆಯೂ ನಿಮ್ಮನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ ಎಂದು ಹೇಳಿ ಆತನಿಗೆ ಶಾಕ್ ನೀಡಿದ್ದಾರೆ. ಅಲ್ಲದೇ ಮಾರನೇ ದಿನವೇ ನಿಮ್ಮ ಕೆಲಸದ ಕೊನೆ ದಿನವಾಗಿದ್ದು, ಸಂಸ್ಥೆಯನ್ನು ಬಿಡುವ ವೇಳೆ ನಡೆಸಬೇಕಾದ ಪ್ರಕ್ರಿಯೆಗಳನ್ನು ನಡೆಸುವಂತೆ ಆತನಿಗೆ ಸೂಚಿಸಿದೆ.
ಪಿಐಪಿ ಅಥವಾ ನೋಟೀಸ್ ಪಿರೇಡ್ ಯಾವುದನ್ನು ನಡೆಸದೇ ಕೇವಲ ಫೋನ್ ಕರೆ ಮಾಡಿ ಆಗಿಂದಾಗಲೇ ಉದ್ಯೋಗಿಗಳನ್ನು ಬೈಜೂಸ್ ವಜಾ ಮಾಡುತ್ತಿದೆ ಎಂದು ಮನಿ ಕಂಟ್ರೋಲ್ ವೆಬ್ ವರದಿ ಮಾಡಿದೆ. ಈ ಸುತ್ತಿನಲ್ಲಿ 100ರಿಂದ 500ರವರೆಗೆ ಉದ್ಯೋಗಿಗಳ ವಜಾ ಮಾಡಲಾಗುತ್ತಿದೆ. ಕಳೆದೆರಡು ವರ್ಷದಿಂದ ಸಂಸ್ಥೆಯ ಹಣಕಾಸು ನಿಧಿ ಇಳಿಮುಖವಾಗಿದ್ದು, ಹೂಡಿಕೆದಾರರು ಮತ್ತು ಇತರ ಮಧ್ಯಸ್ಥಗಾರರ ನಡುವೆ ಕಾನೂನು ಸಮರ ನಡೆಯುತ್ತಿರುವುದರಿಂದ ಬೈಜುಸ್ ಕನಿಷ್ಠ 10,000 ಉದ್ಯೋಗಿಗಳನ್ನು ವಜಾಗೊಳಿಸಿದೆ.