ನವದೆಹಲಿ: 33 ವರ್ಷಗಳಿಂದ ರಾಜ್ಯಸಭೆಯ ಸದಸ್ಯರಾಗಿದ್ದ ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರ ಅವಧಿ ಏಪ್ರಿಲ್.02ಕ್ಕೆ (ಮಂಗಳವಾರ) ಕೊನೆಗೊಂಡಿದೆ.
ದೇಶದ ಆರ್ಥಿಕತೆಯ ಸುಧಾರಣೆಗೆ ಹಲವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದ್ದ ಮನಮೋಹನ್, 1991ರ ಅಕ್ಟೋಬರ್ನಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಸದಸ್ಯರಾಗಿದ್ದರು. ಭಾರತದ ಏಕೈಕ ಸಿಖ್ ಪ್ರಧಾನಿಯಾಗಿರುವ ಸಿಂಗ್ ಅವರು ವೈಯಕ್ತಿಕ ಮಟ್ಟದಲ್ಲಿ ಜಂಟಲ್ಮನ್ ಹಾಗೂ ಮುತ್ಸದ್ಧಿ ಆಗಿದ್ದವರು.
2004ರಿಂದ 2014ರವರೆಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್ ಅವರು ಹುಟ್ಟಿದ್ದು ಇಂದಿನ ಪಾಕಿಸ್ತಾನದ ಗಹ್ ಎಂಬ ಸಣ್ಣ ಪಟ್ಟಣದಲ್ಲಿ. 1947ರಲ್ಲಿ ವಿಭಜನೆ ಸಂದರ್ಭದಲ್ಲಿ ಸಿಂಗ್ ಅವರ ಕುಟುಂಬ ಭಾರತಕ್ಕೆ ವಲಸೆ ಬಂದು ನೆಲೆಸಿತು. ಅರ್ಥಶಾಸ್ತ್ರದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಸಿಂಗ್ 1966-69ರವರೆಗೆ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ನಂತರ ವಿದೇಶಾಂಗ ವ್ಯವಹಾರ ಸಚಿವಾಲಯದಲ್ಲಿ ಸಲಹೆಗಾರರಾಗಿದ್ದರು.
ಉರ್ದು ಮತ್ತು ಇಂಗ್ಲಿಷ್ನಲ್ಲಿ ಪ್ರವೀಣರಾಗಿರುವ ಸಿಂಗ್ ಅತ್ಯುತ್ತಮ ಸಂಸದೀಯ ಭಾಷಣಕಾರರಲ್ಲಿ ಒಬ್ಬರಾಗಿದ್ದರು. “ಯಾರ ಸಮಯ ಬಂದಿದೆಯೋ ಅವರನ್ನು ಭೂಮಿಯ ಮೇಲಿನ ಯಾವುದೇ ಶಕ್ತಿಯು ತಡೆಯಲು ಸಾಧ್ಯವಿಲ್ಲ. ಭಾರತವು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವುದು ಅಂತಹ ಒಂದು ಸಾಧ್ಯತೆ” ಎಂದು ಸಿಂಗ್ ಅವರು 1991ರಲ್ಲಿ ತಮ್ಮ ಮೊದಲ ಬಜೆಟ್ ಮಂಡನೆಯಲ್ಲಿ ಹೇಳಿದ್ದರು. 1984ರ ಸಿಖ್ ವಿರೋಧಿ ಹತ್ಯಾಕಾಂಡದ ಕುರಿತು ಮೇಲ್ಮನೆಯಲ್ಲಿ “ನಾನು ನಾಚಿಕೆಯಿಂದ ತಲೆ ಬಾಗಿಸುತ್ತೇನೆ” ಎಂದು ಹೇಳಲು ಅವರು ಹಿಂಜರಿಯಲಿಲ್ಲ.
ಸಿಂಗ್ ಅವರನ್ನು “ಮಧ್ಯಮ ವರ್ಗದ ಹೀರೋ” ಎಂದು ಶ್ಲಾಘಿಸಿದ ಖರ್ಗೆ, “ನೀವು ಪ್ರಧಾನಿ ಕಚೇರಿಗೆ ತಂದ ಶಾಂತತೆ ಮತ್ತು ಘನತೆಯನ್ನು ರಾಷ್ಟ್ರವು ಕಳೆದುಕೊಳ್ಳುತ್ತಿದೆ. ಸಂಸತ್ತು ಈಗ ನಿಮ್ಮ ಬುದ್ಧಿವಂತಿಕೆ ಮತ್ತು ಅನುಭವವನ್ನು ಕಳೆದುಕೊಳ್ಳಲಿದೆ. ನಿಮ್ಮ ಘನತೆ, ಅಳತೆ, ಮೃದುವಾಗಿ ಆಡುವ, ಈಗಿನ ರಾಜಕಾರಣಿಗಳ ಸುಳ್ಳುಗಳಿಂದ ತುಂಬಿದ ದೊಡ್ಡ ಧ್ವನಿಗಳಿಗೆ ವಿರುದ್ಧವಾದ ಮಾತುಗಳನ್ನು ಕಳೆದುಕೊಳ್ಳಲಿದೆ” ಎಂದಿದ್ದಾರೆ.
ಸಂಸತ್ತಿನಲ್ಲಿ ಸಿಂಗ್ ಅವರ ಕೊನೆಯ ಮಾತು, ನೋಟು ಅಮಾನ್ಯೀಕರಣದ ವಿರುದ್ಧ ಬಂದಿತ್ತು. ಅದನ್ನು ಅವರು “ಸಂಘಟಿತ ಮತ್ತು ಕಾನೂನುಬದ್ಧ ಲೂಟಿ” ಎಂದು ಕರೆದಿದ್ದರು. ಸಿಂಗ್ ಪ್ರಧಾನಿಯಾಗಿದ್ದಾಗ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಅವರು, “ಹಲವು ವರ್ಷಗಳ ಕಾಲ ಡಾ ಸಿಂಗ್ ಅವರೊಂದಿಗೆ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಜೀವನದ ಶ್ರೇಷ್ಠ ಸವಲತ್ತುಗಳಲ್ಲಿ ಒಂದಾಗಿದೆ” ಎಂದಿದ್ದಾರೆ.