ಚಿಕ್ಕಮಗಳೂರು: ಸಾಧು ಸಂತರಂತೆ ಕಾವಿ ಧರಿಸಿ ಮನೆಗೆ ಬಂದು ಮಹಿಳೆಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ತರೀಕೆರೆಯಲ್ಲಿ ನಡೆದಿದೆ.
ನಾಲ್ವರು ಕಾವಿಧಾರಿಗಳು ಮನೆಗೆ ಬಂದು ಮಹಿಳೆಯ ಹತ್ತಿರ ಪೂಜೆ ಮಾಡುವುದಾಗಿ ನಂಬಿಸಿ ಮಹಿಳೆಯ ಎಚ್ಚರ ತಪ್ಪಿಸಿ, ಮಹಿಳೆ ಧರಿಸಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಮಹಿಳೆಗೆ ಎಚ್ಚರವಾದ ಮೇಲೆ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ವೇಳೆ ಮಹಿಳೆ ನೆರೆಹೊರೆಯವರಿಗೆ ನಡೆದ ಘಟನೆ ತಿಳಿಸಿದ್ದಾರೆ. ಕಳ್ಳರನ್ನು ಹುಡುಕಿ ಹೋದ ಜನ, ರಸ್ತೆಯಲ್ಲಿ ಹೋಗುತ್ತಿದ್ದ ಅಮಾಯಕ ಬುಡುಬುಡುಕೆ ಕಾವಿಧಾರಿ ಒಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆಸಿದ ಬಳಿಕ ಆತ ತಪ್ಪಿತಸ್ಥನಲ್ಲ ಎಂಬುದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.