ನವದೆಹಲಿ: ಆನ್ಲೈನ್ ಫೂಡ್ ಡೆಲಿವರಿ ಸಂಸ್ಥೆ ಜೊಮಾಟೊ ತನ್ನ ಪ್ಲಾಟ್ಫಾರ್ಮ್ ಶುಲ್ಕವನ್ನು ಶೇ. 25ರಷ್ಟು ಹೆಚ್ಚಿಸಿದೆ. ಇದರೊಂದಿಗೆ 4 ರೂ ಇದ್ದ ಪ್ಲಾಟ್ಫಾರ್ಮ್ ಫೀ ಈಗ ಐದು ರುಪಾಯಿಗೆ ಏರಿದೆ.
ಕಳೆದ ಒಂದು ವರ್ಷದಿಂದ ಜೊಮಾಟೋ ಸತತವಾಗಿ ಪ್ಲಾಟ್ಫಾರ್ಮ್ ಫೀ ಹೆಚ್ಚಿಸುತ್ತಾ ಬಂದಿದೆ. 2023ರ ಆಗಸ್ಟ್ ತಿಂಗಳಲ್ಲಿ ಮೊದಲ ಬಾರಿ ಎರಡು ರೂ ಪ್ಲಾಟ್ಫಾರ್ಮ್ ಫೀ ಜಾರಿ ತಂದಿತ್ತು. ನಷ್ಟ ದೂರಗೊಳಿಸಿ ಸಂಸ್ಥೆಯನ್ನು ಲಾಭದ ಹಳಿಗೆ ತರಲು ಈ ಕ್ರಮ ಕೈಗೊಳ್ಳಲಾಗಿತ್ತು.
ಜನವರಿಯಲ್ಲಿ ಜೊಮಾಟೊ ಪ್ಲಾಟ್ಫಾರ್ಮ್ ಫೀ ಅನ್ನು 3 ರುಪಾಯಿಗೆ ಹೆಚ್ಚಾಗಿತ್ತು. ನಂತರ ಹೊಸ ವರ್ಷದಿಂದ (ಜ.1) ನಾಲ್ಕು ರೂ ಶುಲ್ಕ ವಿಧಿಸತೊಡಗಿತ್ತು. ಪ್ಲಾಟ್ಫಾರ್ಮ್ ಶುಲ್ಕ ಎಂಬುದು ಪ್ರತೀ ಆರ್ಡರ್ಗೆ ವಿಧಿಸಲಾಗುವ ನಿರ್ದಿಷ್ಟ ಶುಲ್ಕವಾಗಿರುತ್ತದೆ. ಎಷ್ಟೇ ಮೊತ್ತದ ಆರ್ಡರ್ ಇದ್ದರೂ ಈ ಜೊಮಾಟೊ 5 ರೂ ಪ್ಲಾಟ್ಫಾರ್ಮ್ ಫೀ ವಿಧಿಸುತ್ತದೆ.
ಜೊಮಾಟೊ ಒಂದು ವರ್ಷದಲ್ಲಿ 85-90 ಕೋಟಿ ಆರ್ಡರ್ಗಳನ್ನು ಪಡೆಯುತ್ತದೆ. ಈಗ ಒಂದು ರೂ ಪ್ಲಾಟ್ಫಾರ್ಮ್ ಫೀ ಹೆಚ್ಚಿಸಿದ್ದರಿಂದ ವರ್ಷಕ್ಕೆ 85ರಿಂದ 90 ಕೋಟಿ ರೂ ಹೆಚ್ಚುವರಿ ಆದಾಯ ಜೊಮಾಟೊಗೆ ಸಿಕ್ಕಂತಾಗುತ್ತದೆ.
ಸದ್ಯ ಈ ಶುಲ್ಕ ಹೆಚ್ಚಳ ಆಯ್ದ ನಗರಗಳಲ್ಲಿ ಜಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲಾ ನಗರಗಳಲ್ಲೂ ಅನ್ವಯ ಆಗಬಹುದು.