ಬನ್ನೇರುಘಟ್ಟ: ಮಾಲಿನ್ಯ ಮುಕ್ತ ಪರಿಸರ ನಿರ್ಮಾಣಕ್ಕೆ ಮತ್ತು ವನ್ಯಜೀವಿ, ಸಸ್ಯ ಸಂಕುಲದ ಉಳಿವಿಗೆಗೆ ಜಾಗೃತಿಯೊಂದೇ ಮಾರ್ಗವಾಗಿದ್ದು, ಈ ನಿಟ್ಟಿನಲ್ಲಿ ಚಿಣ್ಣರ ವನದರ್ಶನ ಅತ್ಯಂತ ಸಹಕಾರಿಯಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಬನ್ನೇರುಘಟ್ಟದ ಜಂಗಲ್ ಲಾಜ್ ನಲ್ಲಿಂದು ನಡೆದ ಚಿಣ್ಣರ ವನದರ್ಶನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಕಳೆದ 10 ವರ್ಷದಿಂದ ಮಕ್ಕಳಲ್ಲಿ ಅರಣ್ಯ, ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಮತ್ತು ಚಿಣ್ಣರಿಗೆ ಖುದ್ದು ಅರಣ್ಯ, ವನ್ಯಜೀವಿ ವೀಕ್ಷಣೆಗೆ ಅ ನಮವಕಾಶ ಕಲ್ಪಿಸುವ ಈ ಕಾರ್ಯಕ್ರಮ ಮಹತ್ವಪೂರ್ಣ ಎಂದರು.
ಚಿಣ್ಣರ ವನದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಅರಣ್ಯ ಸೇವೆ ಸೇರುವ ಸ್ಫೂರ್ತಿ ಸಿಗುತ್ತದೆ ಎಂದು ಅವರು ಇಲ್ಲಿ ಪಾಲ್ಗೊಂಡ ಎಲ್ಲರೂ ತಮ್ಮ ಮನೆಯ ಮುಂದೆ ಒಂದು ಗಿಡ ನೆಟ್ಟು ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಹಸಿರೇ ಉಸಿರು, ಕಾಡು ಬೆಳೆಸಿ ನಾಡು ಉಳಿಸಿ ಎಂಬ ಘೋಷಣೆ ನಾನೆಲ್ಲರೂ ಕೇಳಿದ್ದೇವೆ. ಇದನ್ನು ಘೋಷಣೆಗೆ ಸೀಮಿತಗೊಳಿಸದೆ ಕಾರ್ಯಾನುಷ್ಠಾನ ಮಾಡಬೇಕು. ನಮ್ಮ ರಾಜ್ಯದ ಹಸಿರು ಹೊದಿಕೆ ವ್ಯಾಪ್ತಿ ಶೇ.22ರಷ್ಟಿದೆ. ಆದರೆ ಇದು ಶೇ.33ರಷ್ಟಾಗಬೇಕು. ಇದಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಈವರೆಗೆ 1ಲಕ್ಷ 17 ಸಾವಿರ ವಿದ್ಯಾರ್ಥಿಗಳು ಅದರಲ್ಲೂ ಈ ವರ್ಷ 20 ಸಾವಿರ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆದಿದ್ದಾರೆ ಎಂದು ತಿಳಿಸಿದ ಅವರು ಪ್ರಕೃತಿ ಉಳಿದರೆ ನಾವು ಉಳಿಯುತ್ತೇವೆ ಎಂದು ಹೇಳಿದರು.
ಮಣ್ಣಲ್ಲಿ ಮಣ್ಣಾಗದ, ನೀರಲ್ಲಿ ಕರಗದ ಏಕ ಬಳಕೆ ಪ್ಲಾಸ್ಟಿಕ್ ತ್ಯಜಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದ ಸಚಿವರು, ಪರಿಸರ ಸ್ವಚ್ಛತೆಗೂ ಆದ್ಯತೆ ನೀಡಿ ಈ ಬಗ್ಗೆ ಇತರರಿಗೂ ಜಾಗೃತಿ ಮೂಡಿಸುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾನನ ಕಣಜ ಕಿರುಹೊತ್ತಗೆಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬ್ರಿಜೇಶ್ ದೀಕ್ಷಿತ್, ಸುಭಾಷ್ ಮಾಲ್ಕಡೆ, ಕ್ಯಾಂಪಾ ಸಿಇಓ ಸಂಜಯ್ ಬಿಜ್ಜೂರ್ ಮತ್ತಿತರರು ಪಾಲ್ಗೊಂಡಿದ್ದರು.