ಪುತ್ತೂರು: ಪಾಕಿಸ್ಥಾನದ ಸೈನಿಕರು ನಮ್ಮ ಮೇಲೆರಗಿ ಒಂದೇ ಸಮನೆ ಗುಂಡಿನ ದಾಳಿಗೈದುಬಿಟ್ಟರು. ಜತೆಗಿದ್ದ ಅಷ್ಟೂ ಮಂದಿ ಸ್ಥಳದಲ್ಲೇ ಮೃತಪಟ್ಟರೆ ತಾನು ಸತ್ತಂತೆ ನಟಿಸುತ್ತಾ ಬಿದ್ದಿದ್ದೆ. ಸತ್ತವರ ಮೇಲೆ ಮತ್ತೆ ಮತ್ತೆ ಗುಂಡಿನ ಸುರಿಮಳೆಯಾಗುತ್ತಿತ್ತು. ಆ ದಾಳಿಯಲ್ಲಿ ಕಾಲುಗಳು ಛಿದ್ರವಾದವು.
ಆದರೂ ತುಟಿಪಿಟಕ್ಕೆನ್ನದೆ ಸಾವನ್ನು ಹತ್ತಿರದಿಂದ ಕಂಡು ಮನಸ್ಸು ಗಟ್ಟಿ ಮಾಡಿ ಕೈಯಲ್ಲಿದ್ದ ಗ್ರೆನೇಡ್ ಎಸೆದು ಪಾಕಿಸ್ಥಾನದ ಸೈನಿಕರನ್ನು ಸುಟ್ಟುಹಾಕಿದೆ. ಇದ್ದಕ್ಕಿದ್ದಂತೆ ದಾಳಿಯಾದದ್ದನ್ನು ಕಂಡ ಪಾಕಿಸ್ಥಾನಿ ಸೈನಿಕರು ಭಾರತದ ಮತ್ತೊಂದು ಸೇನಾ ತುಕಡಿ ತಮ್ಮನ್ನು ಆಕ್ರಮಿಸುತ್ತಿದೆ ಎಂದು ಭಾವಿಸಿ ಓಡತೊಡಗಿದರು. ಹಾಗೋ ಹೀಗೋ ರೈಫಲ್ ತೆಗೆದು ಮತ್ತೆ ಐದು ಜನ ಪಾಕಿಸ್ಥಾನದ ಸೈನಿಕರನ್ನು ಹೊಡೆದುಹಾಕಿದೆ.
ಅತಿ ಕಿರಿಯ ವಯಸ್ಸಿನಲ್ಲಿ ಭಾರತೀಯ ಸೈನ್ಯದಿಂದ ಕೊಡಮಾಡುವ ಅತ್ಯುಚ್ಚ ಪ್ರಶಸ್ತಿಯಾದ ಪರಮವೀರ ಚಕ್ರವನ್ನು ಮುಡಿಗೇರಿಸಿಕೊಂಡ ಕ್ಯಾಪ್ಟನ್ ಯೋಗೀಂದ್ರ ಸಿಂಗ್ ಯಾದವ್ ಮೇಲಿನ ಮಾತುಗಳನ್ನು ಹೇಳುತ್ತಿದ್ದರೆ ನೆರೆದಿದ್ದ ಜನಸ್ತೋಮದ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು.
ಇಂತಹದ್ದೊಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾದದ್ದು ಪುತ್ತೂರಿನ ಕಿಲ್ಲೆ ಮೈದಾನ. ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರಿನ ಮಾಜಿ ಸೈನಿಕರ ಸಂಘ ಹಾಗೂ ಅಮರ್ ಜವಾನ್ ಜ್ಯೋತಿ ಸಂರಕ್ಷಣಾ ಸಮಿತಿಗಳು ಅನ್ಯಾನ್ಯ ಸಂಘಟನೆಗಳ ಸಹಕಾರದೊಂದಿಗೆ ಶುಕ್ರವಾರ ಕಾರ್ಗಿಲ್ ವಿಜಯೋತ್ಸವದ ಇಪ್ಪತ್ತೈದನೆಯ ವರ್ಷಾಚರಣೆಯನ್ನು ಇತಿಹಾಸದ ಪುಟದಲ್ಲಿ ದಾಖಲಾಗುವಂತೆ ಆಯೋಜಿಸಿದವು.
ದೇಶಕ್ಕಾಗಿ ಈ ದೇಹ ಸಮರ್ಪಣೆಯಾಗಬೇಕೆಂಬ ಒಂದೇ ಕನಸಿನೊಂದಿಗೆ ಸೇನೆಗೆ ಸೇರಿ ಸೇವೆ ಸಲ್ಲಿಸುವುದಕ್ಕೆ ಸಾಧ್ಯವಾಯಿತು. ಅಕ್ಷರಶಃ ತೆವಳಿಕೊಂಡು ಕಡಿದಾದ ಬೆಟ್ಟವನ್ನೇರುತ್ತಾ ವಿರೋಧಿಗಳೊಂದಿಗೆ ಹೋರಾಡಬೇಕಿತ್ತು. ಆದರೆ ರಾಷ್ಟ್ರ ಎಂಬ ಭಾವನೆ ಬಂದಾಗ ಎಲ್ಲವೂ ಸಾಧ್ಯವಾಗುತ್ತದೆ. ದೇಶದ ಒಳಗಿನ ವ್ಯವಸ್ಥೆ ಸದೃಢವಾಗಿ ಬೆಳೆಯಬೇಕಾದರೆ ಸೈನ್ಯ ಗಡಿ ಭಾಗದಲ್ಲಿ ಸದಾ ಸನ್ನದ್ಧವಾಗಿರಬೇಕು ಎಂದು ನುಡಿದರು.
ಮತ್ತೋರ್ವ ಅತಿಥಿ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿ ತನ್ನ ಕಾಲುಗಳನ್ನು ಕಳೆದುಕೊಂಡ ಹುಬ್ಬಳ್ಳಿಯ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ ಮಾತನಾಡಿ ಕಾರ್ಗಿಲ್ ಯುದ್ಧದ ಆರಂಭಿಕ ದಿನಗಳಲ್ಲಿ ಬೆಟ್ಟದ ಮೇಲೆ ಏನಾಗುತ್ತಿದೆ ಎಂಬುದೇ ಅರಿವಾಗುತ್ತಿರಲಿಲ್ಲ. ಬಂದಿದ್ದವರು ಪಾಕಿಸ್ಥಾನದ ಸೈನಿಕರೇ, ಉಗ್ರಗಾಮಿಗಳೇ ಯಾರು ಎಂಬುದೇ ಅರ್ಥವಾಗಿರಲಿಲ್ಲ. ಪಾಕಿಸ್ಥಾನ ಆಕ್ರಮಣ ನಡೆಸುತ್ತಿದೆ ಎಂದು ಖಾತ್ರಿಯಾಗುವ ವೇಳೆಗಾಗಲೇ ನಮ್ಮ ಇಪ್ಪತ್ತೇಳು ಸೈನಿಕರು ಪಾಕಿಸ್ಥಾನದ ಸೈನಿಕರಿಂದ ಹತ್ಯೆಗೊಳಗಾಗಿದ್ದರು. ಆದರೆ ಅನಂತರ ಭಾರತೀಯ ಸೈನ್ಯ ಪ್ರತಿ ಹಂತದಲ್ಲೂ ಗೆಲುವನ್ನು ಸಾಧಿಸುತ್ತಲೇ ಬಂದಿತು ಎಂದರು.
ಕ್ಯಾಪ್ಟನ್ ಯೋಗೀಂದ್ರ ಸಿಂಗ್ ಯಾದವ್ ಹಾಗೂ ಕ್ಯಾಪ್ಟನ್ ನವೀನ್ ನಾಗಪ್ಪ ಅವರನ್ನು ಅಂಬಿಖಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಸೇನಾ ಪದಕದ ಚಿನ್ನದ ಪ್ರತಿರೂಪಗಳನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ಆಯೋಜಿಸಲಾದ ಇಂಗ್ಲಿಷ್ ಭಾಷಣ, ಕನ್ನಡ ಭಾಷಣ ಹಾಗೂ ದೇಶಭಕ್ತಿಗೀತೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ.ನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಲಾ ಶೆಟ್ಟಿ, ನಗರ ಸಭಾ ಆಯುಕ್ತ ಮಧು ಎಸ್ ಮನೋಹರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಸ್ವಾಗತಿಸಿದರು. ನ್ಯಾಯವಾದಿ ಮಹೇಶ್ ಕಜೆ ವಂದಿಸಿದರು. ಉಪನ್ಯಾಸಕ ಆದರ್ಶ ಗೋಖಲೆ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ದರ್ಬೆ ವೃತ್ತದ ಬಳಿಯಿಂದ ಕಿಲ್ಲೆ ಮೈದಾನದವರೆಗೆ ಬೃಹತ್ ಮೆರವಣಿಗೆ ನಡೆಯಿತು. ಇಬ್ಬರೂ ಕಾರ್ಗಿಲ್ ಯೋಧರನ್ನು ತೆರೆದ ವಾಹನದಲ್ಲಿ ಅಪಾರ ಹಾರಾರ್ಪಣೆಗಳ ಮೂಲಕ ಕರೆತರಲಾಯಿತು. ಮಾಜಿ ಸೈನಿಕರ ಸಂಘದಿಂದ ಗೌರವ ಕಾರ್ಗಿಲ್ ಯೋಧರಿಗೆ ಸಮರ್ಪಣೆ ನಡೆಯಿತು. ಬಳಿಕ ಅಮರ್ ಜವಾನ್ ಜ್ಯೋತಿಯಲ್ಲಿ ರೀತ್ ಸಮರ್ಪಣೆ ನೆರವೇರಿತು.