ಮೈಶುಗರ್ ಕಾರ್ಖಾನೆ ಉಳಿವು, ಬೃಂದಾವನ ಉದ್ಯಾನ ಅಭಿವೃದ್ಧಿ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಚರ್ಚೆ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮಂಡ್ಯ, ಆಗಸ್ಟ್,9,2024 (www.justkannada.in):  ಮಂಡ್ಯ ಜಿಲ್ಲೆಯ ಪ್ರಮುಖ ಸಮಸ್ಯೆ, ಐತಿಹಾಸಿಕ ಮೈಶುಗರ್ ಕಾರ್ಖಾನೆ ಉಳಿವು, ಕೆಆರ್ ಎಸ್ ನ ಬೃಂದಾವನ ಉದ್ಯಾನವನ ಅಭಿವೃದ್ಧಿ ಸೇರಿದಂತೆ ವಿವಿಧ ವಿಚಾರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆಯ ನಾಯಕರು ಹಾಗೂ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್   ಬೃಂದಾವನ ಉದ್ಯಾನವನ ಅಭಿವೃದ್ಧಿ ಸಂಬಂಧ ಉಪ ಮುಖ್ಯಮಂತ್ರಿ ಅವರು ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು. ನಂತರ ಕೆಆರ್ ಎಸ್ ನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು ವಿವಿಧ ಸಭೆಗಳ ಮಾಹಿತಿ ನೀಡಿದರು.

ಬೃಂದಾವನ ಉದ್ಯಾನ ಮೇಲ್ದರ್ಜೆಗೆ ಏರಿಸಲು “ಈಗ ಇರುವ 200 ಎಕರೆ ಜಾಗದಲ್ಲಿ ಯೋಜನೆ ಆರಂಭಿಸುತ್ತೇವೆ. ಅಣೆಕಟ್ಟಿನ ರಕ್ಷಣೆಗೆ ಅಗತ್ಯವಿರುವ ಜಾಗವನ್ನು ಬಿಟ್ಟು ಇತರೆ ಜಾಗದಲ್ಲಿ ನಾವು ಯೋಜನೆ ರೂಪಿಸುತ್ತಿದ್ದೇವೆ. ಎರಡು ಮೂರು ಪಂಚಾಯ್ತಿ ಸೇರಿ ಇದಕ್ಕೆ ಯೋಜನಾ ಪ್ರದೇಶ ರೂಪಿಸುತ್ತೇವೆ. ಮುಂದೆ ಹತ್ತಾರು ಸಾವಿರ ಉದ್ಯೋಗ ಸೃಷ್ಟಿಯಾಗಿ ಹೆಚ್ಚಿನ ಜನ ಆಗಮಿಸುವ ನಿರೀಕ್ಷೆಯಿಂದ ರಸ್ತೆ ಅಗಲೀಕರಣ ಸೇರಿದಂತೆ, ಈ ಭಾಗದ ಪ್ರವೇಶ ಹಾಗೂ ನಿರ್ಗಮನದಲ್ಲಿ ನಾಲ್ಕು ಪಥದ ರಸ್ತೆ, ನೀರು, ಒಳಚರಂಡಿ ವ್ಯವಸ್ಥೆ ಮಾಡಲಾಗುವುದು. ಬೃಂದಾವನ ಹಾಗೂ ರಂಗನತಿಟ್ಟು ಪಕ್ಷಿಧಾಮ ಸೇರಿದಂತೆ ಪ್ರವಾಸೋದ್ಯಮ ಉತ್ತೇಜನ ನೀಡಲು ಯೋಜನೆ ರೂಪಿಸಲಾಗುತ್ತಿದೆ” ಎಂದು ತಿಳಿಸಿದರು.

“ನಮ್ಮ ಪರಂಪರೆ ಉಳಿಸಿಕೊಂಡು, ಹಳೆಯ ಮಾದರಿಯಲ್ಲಿ ಕೆಲವು ಮಾರ್ಪಾಡು ಮಾಡಿಕೊಳ್ಳಲಾಗಿದೆ. ಈ ಯೋಜನೆಗೆ ನಾವು 2 ಸಾವಿರ ಕೋಟಿ ಅನುದಾನ ಇಟ್ಟುಕೊಂಡಿದ್ದು, ಉದ್ಯಾನವನ ಮೇಲ್ದರ್ಜೆಗೆ ಮಾಡುವವರು ಯಾವ ರೀತಿ ಮಾಡಬೇಕು ಎಂದು ಕೆಲವು ಮಾರ್ಗಸೂಚಿಯನ್ನು ನಿಗದಿಪಡಿಸಿದ್ದೇವೆ. ಅಣೆಕಟ್ಟಿಗೆ ಯಾವುದೇ ತೊಂದರೆಯಾಗದಂತೆ  ಅಣೆಕಟ್ಟಿನ ಘನತೆ ಹೆಚ್ಚಿಸಿ ಆರ್ಥಿಕ ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಮೈಶುಗರ್ ಕಾರ್ಖಾನೆ ಉಳಿಸಲು ಚರ್ಚೆ:

ಮಂಡ್ಯ ಜಿಲ್ಲೆಯ ಸಮಸ್ಯೆ ಕುರಿತು ಇಲ್ಲಿನ ನಾಯಕರ ಜತೆ ಚರ್ಚೆ ಮಾಡಿದ್ದೇವೆ. ಐತಿಹಾಸಿಕ ಮೈಶುಗರ್ ಕಾರ್ಖಾನೆ ಹೇಗೆ ಉಳಿಸಿಕೊಳ್ಳಬೇಕು, ರೈತರಿಗೆ ಅನುಕೂಲ ಮಾಡಿಕೊಡಬೇಕು  ಎಂಬ ಉದ್ದೇಶದಿಂದ ಸಭೆ ಮಾಡಿದ್ದೇವೆ. ಹೊಸ ಕಾರ್ಖಾನೆ ಆರಂಭಿಸುವ ಬಗ್ಗೆ ಹಾಗೂ ಇರುವ ಕಾರ್ಖಾನೆಗೆ ಹೊಸ ವ್ಯವಸ್ಥೆ ಕಲ್ಪಿಸುವುದೇ ಎಂದು ತಾಂತ್ರಿಕ ಸಮಿತಿ ಮುಂದೆ ಚರ್ಚೆ ಮಾಡಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಸಕ್ಕರೆ ಕಾರ್ಖಾನೆಯಲ್ಲಿ 10 ಸಾವಿರ ಟಿಸಿಡಿ ಮಾಡುವುದು ನಮ್ಮ ಮುಂದೆ ಇರುವ ಆಯ್ಕೆ. ಇದನ್ನು ಮಾಡಿದರೆ ಬೇಕಾಗಿರುವ ಕಬ್ಬನ್ನು ಎಲ್ಲಿಂದ ತರುವುದು? ಬೆಳೆ ಪ್ರಮಾಣ ಎಷ್ಟಿದೆ? ಎಂದು ಅಧಿಕಾರಿಗಳ ಜತೆ ಸುದೀರ್ಘ ಚರ್ಚೆ ಮಾಡಿದ್ದೇವೆ. ಈಗಿರುವ 5 ಸಾವಿರ ಟಿಸಿಡಿ ಸಂಪೂರ್ಣವಾಗಿ ನಡೆದು ಅಲ್ಲಿ ಎಥೆನಾಲ್ ಘಟಕ ಸೇರಿದಂತೆ ಎಲ್ಲವೂ ಕಾರ್ಯಾರಂಭವಾಗಿ ಸಂಸ್ಥೆ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು. ನಾವು ದೊಡ್ಡ ಕಾರ್ಖಾನೆ ಮಾಡುವುದು ದೊಡ್ಡದಲ್ಲ. ಅದಕ್ಕೆ ತಕ್ಕಂತೆ ರೈತರು ಕಬ್ಬು ಬೆಳೆಯಲು ಉತ್ತೇಜನ ನೀಡಬೇಕು” ಎಂದು ತಿಳಿಸಿದರು.

“ನಮಗಿರುವ ವರದಿ ಪ್ರಕಾರ ಅಕಾಲಿಕ ಮಳೆಯಿಂದಾಗಿ ರೈತರು ಕಬ್ಬು ಬೆಳೆಯುವುದನ್ನು ಬಿಟ್ಟು ಬೇರೆ ಬೆಳೆ ಬೆಳೆಯಲು ಮುಂದಾಗುತ್ತಿದ್ದಾರೆ. 2 ಸಾವಿರ ರೈತರು ಕಬ್ಬು ಬೆಳೆಗೆ ಮುಂದಾಗಿದ್ದಾರೆ. ಇದಕ್ಕೆ ಏನು ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ. ಜಿಲ್ಲೆಯಲ್ಲಿ ಈ ಕಾರ್ಖಾನೆ ಜತೆಗೆ ಇನ್ನು ಐದಾರು ಕಾರ್ಖಾನೆಗಳಿವೆ. ಎಲ್ಲವೂ ಸುಸ್ಥಿರವಾಗಿರಬೇಕು” ಎಂದರು.

5 ಸಾವಿರ ಟಿಸಿಡಿ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಬೇಕಾಗಿರುವ ಅಗತ್ಯ ಕ್ರಮ ಕೈಗೊಳ್ಳಿ ಎಂದು ತಾಂತ್ರಿಕ ಸಮಿತಿ ತಿಳಿಸಿದೆ. ಹೀಗಾಗಿ ಈಗ ಇರುವ ಘಟಕ ಆರ್ಥಿಕವಾಗಿ ಗಟ್ಟಿಯಾಗುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇನ್ನು ರೈತರಿಗೆ ಬೆಳೆಗೆ ತಕ್ಕ ಬೆಲೆ ಸಿಗುವಂತಾಗಬೇಕು. ರೈತರು ನಿರಂತರವಾಗಿ ಕಬ್ಬು ಬೆಳೆಯುವಂತೆ ಮಾಡಬೇಕು. ಮಧ್ಯೆ ಬರಗಾಲ ಬಂದು ಬೆಳೆ ನಿಲ್ಲುವಂತೆ ಆಗಬಾರದು” ಎಂದರು.

ತಮಿಳುನಾಡಿಗೆ 149 ಟಿಎಂಸಿ ನೀರು ಹರಿದಿದೆ:

ಇನ್ನು ಕಾವೇರಿ ನೀರು ಹರಿಬಿಡುವ ವಿಚಾರವಾಗಿ, ಈಗ ನಾವು ಬಿಳಿಗುಂಡ್ಲುವಿಗೆ 50 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ 96 ಟಿಎಂಸಿ ಹೆಚ್ಚುವರಿಯಾಗಿ ನೀರು ಹರಿಸಿದ್ದೇವೆ. ತಮಿಳುನಾಡು ಪಾಲಿನ 177 ಟಿಎಂಸಿ ನೀರಿನ ಪೈಕಿ ಈಗಾಗಲೇ 149 ಟಿಎಂಸಿ ನೀರನ್ನು ಹರಿಸಲಾಗಿದೆ. ಈಗ ನಮ್ಮ ಭಾಗದಲ್ಲಿ ಎಲ್ಲೆಲ್ಲಿ ಕೆರೆಗಳನ್ನು ತುಂಬಿಸಲು ಸಾಧ್ಯವೋ ಎಲ್ಲಾ ಕೆರೆ ತುಂಬಿಸಲು ಸೂಚನೆ ನೀಡಲಾಗಿದೆ. ಕೆರೆ ತುಂಬಿಸಲು ಇರುವ ಅಡಚಣೆ ನಿವಾರಣೆಗೂ ಸೂಚನೆ ನೀಡಿದ್ದೇನೆ. ನಮ್ಮ ರೈತರು ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಸಲಹೆಯಂತೆ ಬೆಳೆಗಳನ್ನು ಹಾಕಬೇಕು ಎಂದು ರೈತರಲ್ಲಿ ಮನವಿ ಮಾಡುತ್ತೇನೆ ಎಂದರು.

ಸಮುದ್ರಕ್ಕೆ ಸೇರುವ ನೀರನ್ನು ಉಳಿಸಿಕೊಳ್ಳಲು ಮೇಕೆದಾಟು ಯೋಜನೆಯ ಅವಶ್ಯಕತೆ ಇದೆ.  ನಮ್ಮ ಲೆಕ್ಕದ ಪ್ರಕಾರ 71 ಟಿಎಂಸಿಯಷ್ಟು ನೀರು ಸಮುದ್ರದ ಪಾಲಾಗಿದ್ದು, ನಮ್ಮ ಮೇಕೆದಾಟು ಅಣೆಕಟ್ಟಿನ ಸಾಮರ್ಥ್ಯ ಕೇವಲ 66 ಟಿಎಂಸಿ. ಸಮುದ್ರಕ್ಕೆ ಹೋಗುತ್ತಿರುವ ಹೆಚ್ಚುವರಿ ನೀರನ್ನು ಹೇಗೆ ಬಳಸಿಕೊಳ್ಳಬೇಕು ಇದಕ್ಕೆ ಅನುಮತಿ ನೀಡಿ ಎಂದು ಕೇಳುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಪ್ರವಾಸೋದ್ಯಮ, ಕೃಷಿ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಸಚಿವರು ಸೇರಿ ಗಂಗಾರತಿ ಮಾದರಿಯಲ್ಲೇ ಕಾವೇರಿ ಆರತಿ ಬಗ್ಗೆ ಮಾಹಿತಿ ಪಡೆಯಲು ಪ್ರವಾಸ ಕೈಗೊಂಡು ನಂತರ ವರದಿ ನೀಡಲಿದ್ದಾರೆ. ಇದರ ಜತೆಗೆ ಬೃಂದಾವನ ಉದ್ಯಾನ ಮೇಲ್ದರ್ಜೆಗೆ ಏರಿಸುವ ಯೋಜನೆಯಲ್ಲೇ ಕಾವೇರಿ ಆರತಿ ಕಾರ್ಯಕ್ರಮಕ್ಕೂ ಜಾಗ ಮೀಸಲಿಡಲು ಸೂಚನೆ ನೀಡಿದ್ದೇನೆ. ಇದಕ್ಕಾಗಿ ಕೆಲವು ಜಾಗವನ್ನು ಸೂಚಿಸಿದ್ದೇನೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ, ಶಾಸಕ ಪಿ.ರವಿಕುಮಾರ್, ಉದಯ್ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.

Key words: DCM, D.K Shivakumar, Mysugar factory, KRS, Brindavan

Font Awesome Icons

Leave a Reply

Your email address will not be published. Required fields are marked *