ಚಾಮರಾಜನಗರ,ಸೆಪ್ಟಂಬರ್,3,2024 (www.justkannada.in): ಗುರುಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರ.. ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ ಎಂಬ ಉಕ್ತಿ ಗುರುವಿಗೆ ದೇವರ ಸ್ಥಾನ ನೀಡುವುದಲ್ಲದೆ ಅವರ ಮಹತ್ವವನ್ನು ಸಾರುತ್ತದೆ. ಹೀಗೆ ತಾವು ವೃತ್ತಿ ಆರಂಭಿಸಿದ ಶಾಲೆಯಲ್ಲಿ 27 ವರ್ಷ ಸೇವೆ ಸಲ್ಲಿಸಿ ಅದೇ ಶಾಲೆಯಲ್ಲಿ ನಿವೃತ್ತಿ ಪಡೆದ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.
ಹೌದು, ಚಾಮರಾಜನಗರ ತಾಲೂಕಿನ ಹಿರೇಬೇಗೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಬಿ. ಕಾಶಿ ಆರಾಧ್ಯ ಅವರು ಸೇವೆಯಿಂದ ನಿವೃತ್ತಿ ಹೊಂದಿದರು. ಈ ವೇಳೆ ಅವರಿಗೆ ಹಳೇ ವಿದ್ಯಾರ್ಥಿಗಳು ಚಿನ್ನದುಂಗುರ ತೊಡಿಸಿ ಅಭಿಮಾನ ಮೆರೆದರು.
ಇದೇ ಸಮಾರಂಭದಲ್ಲಿ ಕಾಶಿ ಆರಾಧ್ಯ ಅವರು ತಮ್ಮ ಶಾಲೆಯ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಸ್ವಂತ ಹಣದಿಂದ ಸಮವಸ್ತ್ರ ವಿತರಿಸಿದರು. ಜೊತೆಗೆ, ಬಿಸಿಯೂಟ ತಯಾರಿಸುವ 8 ಮಹಿಳಾ ಸಿಬ್ಬಂದಿಗೆ ಸೀರೆ ವಿತರಿಸಿ ಶಾಲೆ ಮತ್ತು ಅಲ್ಲಿನ ಸಿಬ್ಬಂದಿ ಸೇರಿದಂತೆ ಎಲ್ಲರ ಪ್ರೀತಿ, ಗೌರವವನ್ನು ಸ್ಮರಿಸಿದರು.
27 ವರ್ಷ ಕಾಲ್ನಡಿಗೆ ಮೂಲಕ ಸಮಯಪಾಲನೆ; ಕಾಶಿ ಆರಾಧ್ಯ ಅವರು ಮೂಲತಃ ಚಾಮರಾಜನಗರ ತಾಲೂಕಿನ ಕೆಬ್ಬೇಪುರ ಗ್ರಾಮದವರಾಗಿದ್ದು, ಕೆಬ್ಬೇಪುರದಿಂದ ಹಿರೇಬೇಗೂರಿಗೆ 27 ವರ್ಷ ನಿತ್ಯ 8 ಕಿ.ಮೀ ಕಾಲ್ನಡಿಗೆಯಲ್ಲೇ ಬರುತ್ತಿದ್ದರು. ಇವರ ಬಳಿ ಸೈಕಲ್, ಸ್ಕೂಟರ್ ಯಾವುದೂ ಇಲ್ಲ. ಬಸ್ ಮತ್ತು ಇತರೆ ವಾಹನಕ್ಕಾಗಿ ಕಾಯದೇ ಸರಿಯಾದ ಸಮಯಕ್ಕೆ ಶಾಲೆಗೆ ಆಗಮಿಸುತ್ತಿದ್ದರು. ಇವರ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರ ಮನ ಗೆದ್ದಿದ್ದ ಕಾಶಿ ಆರಾಧ್ಯರಿಗೆ ಜನರು ತುಂಬು ಪ್ರೀತಿ, ಭಾರದ ಮನಸ್ಸಿನಿಂದ ಬೀಳ್ಕೊಟ್ಟರು.
ನೆಚ್ಚಿನ ಶಿಕ್ಷಕರ ಕುರಿತು ಶಾಲೆಯ ವಿದ್ಯಾರ್ಥಿ ಮಧು ಎಂಬುವರು ಮಾತನಾಡಿ, ಕಾಶಿ ಗುರುಗಳು ಕಳೆದ 26 ವರ್ಷಗಳಿಂದ ನಮ್ಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿತ್ಯ ನಮ್ಮ ಶಾಲೆಗೆ ನಡೆದುಕೊಂಡೇ ಬರುತ್ತಿದ್ದರು. ಬಸ್, ಬೈಕ್ ಕೂಡ ಹತ್ತುತ್ತಿರಲಿಲಲ್ಲ. ಸಮಯ ಪಾಲನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಅವರು ಕೇವಲ ಪಾಠ ಮಾತ್ರ ಮಾಡುತ್ತಿರಲಿಲ್ಲ, ವಿದ್ಯಾರ್ಥಿಗಳ ಕಷ್ಟಕ್ಕೂ ಸ್ಪಂದಿಸುತ್ತಿದ್ದರು. ಶಾಲೆಯ ಮೇಲೆ ಅವರ ಅಭಿಮಾನ ಎಷ್ಟಿತ್ತಿಂದರೆ ಗ್ರಾಮದ ಮಹಿಳೆಯರಿಗೆ ಇಂದು ಅರಿಶಿನ, ಕುಂಕುಮ ನೀಡಿದರು. ಅವರ ನಿವೃತ್ತಿ ಜೀವನ ಸುಖದಿಂದ ಕೂಡಿರಲಿ ಎಂದು ಪ್ರಾರ್ಥಿಸಿದರು.
Key words: Chamarajanagar, Teacher, retired, gift, gold, student