ಹೀರೋ ಮೋಟೋಕಾರ್ಪ್ ನವೀಕೃತ ಎಕ್ಸ್‌ಟ್ರೀಮ್ 160ಆರ್ 2ವಿ ಬೈಕ್ ಬಿಡುಗಡೆ

ದೇಶದ ಜನಪ್ರಿಯ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೋಕಾರ್ಪ್ ತನ್ನ ನವೀಕೃತ ಎಕ್ಸ್‌ಟ್ರೀಮ್ 160ಆರ್ 2ವಿ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 1.11 ಲಕ್ಷ ಬೆಲೆ ಹೊಂದಿದೆ. ಕೆಲವು ತಿಂಗಳುಗಳ ಹಿಂದೆ ಎಕ್ಸ್‌ಟ್ರೀಮ್ 160ಆರ್ 4ವಿ ಅನ್ನು ನವೀಕರಿಸಿದ ನಂತರ ಹೀರೋ ಕಂಪನಿಯು ಇದೀಗ ಎಕ್ಸ್‌ಟ್ರೀಮ್ 160ಆರ್ 2V ಗೆ ಈ ಬದಲಾವಣೆಗಳನ್ನು ತಂದಿದೆ.

ಎಕ್ಸ್‌ಟ್ರೀಮ್ 160ಆರ್ 2ವಿ ಮಾದರಿಯು 4ವಿ ರೂಪಾಂತರದಿಂದ ಡ್ರ್ಯಾಗ್ ರೇಸ್ ಮತ್ತು 0-60kph ಟೈಮರ್‌ಗಳನ್ನು ಪಡೆದಿದ್ದು, ಜೊತಗೆ ಹೊಸ ಟೈಲ್-ಲೈಟ್ ಮತ್ತು ಸಿಂಗಲ್-ಪೀಸ್ ಸೀಟ್‌ನಂತಹ ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿದೆ. ಹಾಗೆಯೇ ಹೊಸ ಬೈಕಿನಲ್ಲಿ ಪಿಲಿಯನ್ ಸೀಟ್ ಎತ್ತರದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದ್ದು, ಫ್ಲಾಟರ್ ಪ್ರೊಫೈಲ್ ಅನ್ನು ಹೊಂದಿದೆ.

ಹೊಸ ಬೈಕ್ ಮಾದರಿಯು ಕಪ್ಪು ಬಣ್ಣದೊಂದಿಗೆ ಒಂದೇ ರೂಪಾಂತರದಲ್ಲಿ ಮಾತ್ರ ಲಭ್ಯವಿದ್ದು, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರದಲ್ಲಿ ಡ್ರಮ್ ಬ್ರೇಕ್‌ನೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ನೀಡಲಾಗಿದೆ. ಇನ್ನು ಹೊಸ ಬೈಕಿನಲ್ಲಿ ಏರ್-ಕೂಲ್ಡ್ 163.2 ಸಿಸಿ, ಸಿಂಗಲ್-ಸಿಲಿಂಡರ್ ಮೋಟಾರ್ ನೀಡಲಾಗಿದ್ದು, ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 15 ಹಾರ್ಸ್ ಪವರ್ ಮತ್ತು 14ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎಕ್ಸ್‌ಟ್ರೀಮ್ 160ಆರ್ 2ವಿ ಮಾದರಿಯಲ್ಲಿ ಡೈಮಂಡ್ ಫ್ರೇಮ್ ನೊಂದಿಗೆ ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ರಿಯರ್ ಮೊನೊಶಾಕ್‌ ಸಸ್ಷೆಂಷನ್ ನೀಡಲಾಗಿದ್ದು, ಇದರಲ್ಲಿ 160ಆರ್ 4ವಿಯಲ್ಲಿರುವಂತೆಯೇ ಮುಂಭಾಗದಲ್ಲಿ 100/80-17 ಮತ್ತು ಹಿಂಬದಿಯಲ್ಲಿ 130/70 R17 ಟೈರ್ ನೀಡಲಾಗಿದೆ. ಇದರೊಂದಿಗೆ ಹೊಸ ಬೈಕಿನಲ್ಲಿ 795 ಎಂಎಂ ಆಸನದ ಎತ್ತರ ನೀಡಲಾಗಿದ್ದು, 12-ಲೀಟರ್ ಫ್ಯೂಲ್ ಟ್ಯಾಂಕ್ ನೊಂದಿಗೆ 145 ಕೆಜಿ ಒಟ್ಟಾರೆ ತೂಕ ಹೊಂದಿದೆ.

ಈ ಮೂಲಕ ಹೊಸ ಬೈಕ್ ಮಾದರಿಯು ಎಕ್ಸ್‌ಟ್ರೀಮ್ 160 ಆರ್ 4ವಿ ಗಿಂತಲೂ ರೂ 28,000 ಕಡಿಮೆ ಬೆಲೆ ಹೊಂದಿದ್ದು, ಇದು ಬಜಾಜ್ ಪಲ್ಸರ್ ಎನ್150 (ರೂ. 1.25 ಲಕ್ಷ) ಮತ್ತು ಯಮಹಾ ಎಫ್‌ಝಡ್ ಶ್ರೇಣಿಯ ಬೈಕ್‌ಗಳಿಗೆ (ರೂ. 1.17 ಲಕ್ಷ-1.30 ಲಕ್ಷ) ಪ್ರಬಲ ಪ್ರತಿ ಸ್ಪರ್ಧಿಯಾಗಿದೆ.

Font Awesome Icons

Leave a Reply

Your email address will not be published. Required fields are marked *