ದೋಹಾ: ಕರ್ನಾಟಕ ಸಂಘ ಕತಾರ್ ತನ್ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿಗಳು, ಪ್ರಖ್ಯಾತ ವಿದ್ವಾಂಸ ಮತ್ತು ಶಿಕ್ಷಕರಾಗಿಯೂ ಹೆಸರುವಾಸಿಯಾಗಿದ್ದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ನೆನಪಿಗಾಗಿ “ಶಿಕ್ಷಕರ ದಿನ” ವನ್ನು ಆಚರಿಸಿತು.
ಕಾರ್ಯಕ್ರಮವವನ್ನು ದೋಹಾದ ವೈಬ್ರೆಂಟ್ ಇಂಡಸ್ಟ್ರಿಯಲ್ ಸೇಫ್ಟಿ ಸೆಂಟರ್ ನಲ್ಲಿ ಆಯೋಜಿಸಲಾಗಿತ್ತು. ಶಿಕ್ಷಕರ ದಿನಾಚರಣೆಯನ್ನು ಸಂಘವು ಮೊದಲ ಬಾರಿಗೆ ಹಮ್ಮಿಕೊಂಡಿದ್ದು, ಸ್ಥಾಪನೆಯ ಇಪ್ಪತ್ತೈದನೆ ವರ್ಷಾಚರಣೆ ಸಂದರ್ಭದಲ್ಲಿ ಇಪ್ಪತ್ತೈದು ಸದಸ್ಯ ಶಿಕ್ಷಕರು ಗೌರವಕ್ಕೆ ಪಾತ್ರರಾಗಿರುವುದು ಸಂಘಕ್ಕೆ ಸಂತಸದ ಸಂಗತಿ. ಶೈಕ್ಷಣಿಕ ಶಿಕ್ಷಕರೊಂದಿಗೆ, ಕರ್ನಾಟಕ ಸಂಘವು ಆಯೋಜಿಸಿದ ವಾರಾಂತ್ಯದ ಭಾಷಾ ತರಗತಿಗಳನ್ನು ಸ್ವಯಂಪ್ರೇರಿತವಾಗಿ ನಡೆಸುತ್ತಿರುವ ಕನ್ನಡ ಶಿಕ್ಷಕರನ್ನು ಸಹ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಇಂಡಿಯನ್ ಕಲ್ಚರಲ್ ಸೆಂಟರ್ ನ ಅಧ್ಯಕ್ಷರಾದ ಶ್ರೀ ಮಣಿಕಂಠನ್ ಎ.ಪಿ., ಗೌರವಾನ್ವಿತ ಅತಿಥಿಗಳಾಗಿ ಬ್ರಿಲಿಯಂಟ್ ಇಂಡಿಯನ್ ಇಂಟರ್ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲರಾದ ಶ್ರೀಮತಿ ಆಶಾ ಶಿಜು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರು ಶ್ರೀ ಸುಬ್ರಹ್ಮಣ್ಯ ಹೆಬ್ಬಾಗೆಲು, ಸಲಹಾ ಮಂಡಳಿ ಅಧ್ಯಕ್ಷರು ಶ್ರೀ ಮಹೇಶ್ ಗೌಡ, ಸಲಹಾ ಮಂಡಳಿ ಸದಸ್ಯರಾದ ಶ್ರೀ ಮನ್ನಂಗಿ, ಶ್ರೀ ಅರುಣ್, ಶ್ರೀ ದೀಪಕ್ ಶೆಟ್ಟಿ, ಶ್ರೀ ಮಧು, ಡಾ ಸಂಜಯ್ ಕುದರಿ, ಕರ್ನಾಟಕ ಮೂಲದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಕತಾರ್ ನ ವಿವಿಧ ಅಂತಾರಾಷ್ಟ್ರೀಯ ಶಾಲೆಗಳ ಹೆಸರಾಂತ ಶಿಕ್ಷಕರು, ಕರ್ನಾಟಕ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಶಿಕ್ಷಕರ ದಿನಾಚರಣೆಯನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು. ಶ್ರೀ ಅನಿಲ್ ಭಾಸಗಿ ಮತ್ತು ಶ್ರೀಮತಿ ಸುಷ್ಮಾ ಹರೀಶ್ ಅವರು ಅತ್ಯುತ್ತಮವಾಗಿ ನಿರ್ದೇಶಿಸಿದ ಗುರುವಂದನಾ ಗೀತೆಯನ್ನು ಕರ್ನಾಟಕ ಸಂಘದ ಮಕ್ಕಳು ಹಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಿ ಪ್ರೇಕ್ಷಕರ ಮನ ಗೆದ್ದರು. ಅಧ್ಯಕ್ಷರಾದ ಶ್ರೀ ರವಿ ಶೆಟ್ಟಿಯವರು ಸಭಿಕರನ್ನುದ್ದೇಶಿಸಿ ಮಾಡಿದ ಸ್ವಾಗತ ಭಾಷಣದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಕರ ಪ್ರಾಮುಖ್ಯತೆಯ ಬಗ್ಗೆ ಸಂಸ್ಕೃತ ಉಲ್ಲೇಖವನ್ನು ವಿವರಿಸಿ ಅದನ್ನು ಎಲ್ಲಾ ಶಿಕ್ಷಕರಿಗೆ ಸಮರ್ಪಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀ ಮಣಿಕಂಠನ್ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಐಸಿಸಿಯೊಂದಿಗೆ ಕೈಜೋಡಿಸಿದ್ದಕ್ಕಾಗಿ ಕರ್ನಾಟಕ ಸಂಘ ಕತಾರ್ ಗೆ ಧನ್ಯವಾದ ಅರ್ಪಿಸಿದರು ಮತ್ತು ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲಾ ಶಿಕ್ಷಕರನ್ನು ಅಭಿನಂದಿಸಿದರು. ಗೌರವಾನ್ವಿತ ಅತಿಥಿ ಶ್ರೀಮತಿ ಆಶಾ ಶಿಜು ಅವರು ತಮ್ಮ ಭಾಷಣದಲ್ಲಿ ಶಿಕ್ಷಕಿಯಾಗಿ ತಮ್ಮ ಜೀವಮಾನದ ಅನುಭವಗಳನ್ನು ಮತ್ತು ಆ ಅನುಭವಗಳು ಅವರಿಗೆ ಉತ್ತಮ ಶಿಕ್ಷಕಿಯಾಗಲು ಹೇಗೆ ಸಹಾಯ ಮಾಡಿದವು ಎಂಬುದನ್ನು ತಿಳಿಸಿದರು.
ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಾಹಿತ್ಯ ಕ್ಲಬ್ ಗೆ ಕೊಡುಗೆ ನೀಡುವ ಅಂಗವಾಗಿ ಕರ್ನಾಟಕ ಸಂಘದ ಅಧ್ಯಕ್ಷರು ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರು ಕನ್ನಡ ಪುಸ್ತಕಗಳ ಸಂಗ್ರಹವನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮಣಿಕಂಠನ್ ಮತ್ತು ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗೆಲು ಅವರಿಗೆ ಹಸ್ತಾಂತರಿಸಿದರು.
ಕರ್ನಾಟಕ ಸಂಘ ಕತಾರ್ ವತಿಯಿಂದ 2022-2023ನೇ ಸಾಲಿನ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದ ಶ್ರೀಮತಿ ಸಂಜನಾ ಜೀವನ್ ಅವರು ಭಾರತಕ್ಕೆ ಮರುಳುತ್ತಿರುವ ನಿಮಿತ್ತ, ಸಂಘದ ಅಧ್ಯಕ್ಷರು, ಸಲಹಾ ಸಮಿತಿ ಸದಸ್ಯರು, ಸಮಿತಿ ಸದಸ್ಯರ ಉಪಸ್ಥಿತಿಯಲ್ಲಿ ಅವರಿಗೆ ಸ್ಮರಣಿಕೆ ನೀಡುವ ಮೂಲಕ ಬೀಳ್ಕೊಡಲಾಯಿತು. ಕಾರ್ಯಕ್ರಮವನ್ನು ಶ್ರೀಮತಿ ಭುವನಾ ಸೂರಜ್ ಅವರು ಉತ್ತಮವಾಗಿ ನೆಡೆಸಿಕೊಟ್ಟರು ಮತ್ತು ಶ್ರೀಮತಿ ಭಾವನಾ ನವೀನ್ ಸಭೆಗೆ ವಂದನಾರ್ಪಣೆ ಮಾಡಿದರು. ಅಧ್ಯಕ್ಷರೊಂದಿಗೆ ಎಲ್ಲಾ ಸಮಿತಿ ಸದಸ್ಯರು ಮತ್ತು ಸ್ವಯಂಸೇವಕರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.