ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ ಹಾಕಿ ತಂಡದ ಅಜೇಯ ಓಟ ಮುಂದುವರೆದಿದೆ. ಒಂದರ ಹಿಂದೆ ಒಂದರಂತೆ ಹರ್ಮನ್ ಪಡೆ ಸತತ 4 ಪಂದ್ಯಗಳನ್ನು ಗೆದ್ದು ಭೀಗಿದೆ. ರೌಂಡ್ ರಾಬಿನ್ ಸುತ್ತಿನಲ್ಲಿ ಇಂದು ನಡೆದ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಕೊರಿಯಾ ತಂಡವನ್ನು 3-1 ಗೋಲುಗಳಿಂದ ಸೋಲಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ತಂಡದ ಪರ ನಾಯಕ ಹರ್ಮನ್ಪ್ರೀತ್ ಸಿಂಗ್ 2 ಗೋಲು ಗಳಿಸಿದರೆ, ಅರಿಜಿತ್ ಸಿಂಗ್ ಒಂದು ಗೋಲು ಗಳಿಸಿದರು.
ಸಿಕ್ಕ ಎರಡೂ ಪೆನಾಲ್ಟಿ ಕಾರ್ನರ್ಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ನಾಯಕ ಹರ್ಮನ್ಪ್ರೀತ್ ಯಶಸ್ವಿಯಾದರು. ಮೊದಲ ಸೆಷನ್ನ ಎಂಟನೇ ನಿಮಿಷದಲ್ಲಿ ಅರಿಜಿತ್ ಸಿಂಗ್ ಹಂಡ್ಲಾನ್ ಭಾರತದ ಗೋಲಿನ ಖಾತೆ ತೆರೆದರೆ, ನಂತರದ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ನಾಯಕ ಹರ್ಮನ್ಪ್ರೀತ್ ಸಿಂಗ್ ಗೋಲಾಗಿ ಪರಿವರ್ತಿಸಿದರು. ಹೀಗಾಗಿ ಮೊದಲ ಸೆಷನ್ನಲ್ಲಿ ಭಾರತ 2-0 ಮುನ್ನಡೆ ಸಾಧಿಸಿತು. ಇತ್ತ ದಕ್ಷಿಣ ಕೊರಿಯಾ ತಂಡ ಗೋಲು ಬಾರಿಸಲು ಹರಸಾಹಸ ಪಡುತ್ತಿತ್ತಾದರೂ ಭಾರತದ ರಕ್ಷಣಾ ವಿಭಾಗವನ್ನು ಭೇದಿಸಲು ಸಾಧ್ಯವಾಗಲಿಲ್ಲ.
ಎರಡನೇ ಸೆಷನ್ನಲ್ಲಿ ಎರಡೂ ತಂಡಗಳಿಂದ ಸಮಬಲದ ಹೋರಾಟ ಕಂಡುಬಂದಿತು. ಅದರ ಫಲವಾಗಿ ಸೆಷನ್ನ ಕೊನೆಯ ನಿಮಿಷದಲ್ಲಿ ಕೊರಿಯಾ ಪರ ಯಾಂಗ್ ಮೊದಲ ಗೋಲು ದಾಖಲಿಸಿದರು. ಈ ಸೆಷನ್ನಲ್ಲಿ ಭಾರತದ ಪಾಳಯದಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಮೂರನೇ ಸೆಷನ್ನಲ್ಲಿ ನಾಯಕ ಹರ್ಮನ್ಪ್ರೀತ್ ಮತ್ತೊಂದು ಗೋಲು ಬಾರಿಸಿ ಪಂದ್ಯವನ್ನು 3-1ಕ್ಕೆ ಕೊಂಡೊಯ್ದು ಭಾರತಕ್ಕೆ ಗೆಲುವು ತಂದುಕೊಟ್ಟರು.