47ನೇ ವಿಶ್ವ ಕೌಶಲ್ಯ ಸ್ಪರ್ಧೆ; ಮಣಿಪಾಲ ವ್ಯಾಗ್ಶದ ವಿದ್ಯಾರ್ಥಿ ಹರ್ಷವರ್ಧನ್ ಐತಿಹಾಸಿಕ ಸಾಧನೆ

ಉಡುಪಿ: ಫ್ರಾನ್ಸ್‌ನ ಯುರೆಕ್ಸ್ ಪೋಲಿಯಾನ್‌ನಲ್ಲಿ ಸೆ.10ರಿಂದ 15ರವರೆಗೆ ನಡೆದ 47ನೇ ವಿಶ್ವ ಕೌಶಲ್ಯ ಸ್ಪರ್ಧೆಯ ಅಡುಗೆ ವಿಭಾಗದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ ಮಣಿಪಾಲ ವ್ಯಾಗ್ಶದ ಬಿಎ ಪಾಕಶಾಲೆಯ ವಿದ್ಯಾರ್ಥಿ ಹರ್ಷವರ್ಧನ್ ಅವರು ಮೆಡಾಲಿಯನ್ ಆಫ್ ಎಕ್ಸ್‌ಲೆನ್ಸ್ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಈ ಕುರಿತು ಮಣಿಪಾಲದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವ್ಯಾಗ್ಶದ ಪ್ರಾಂಶುಪಾಲ ಡಾ.ಕೆ.ತಿರು ಜ್ಞಾನ ಸಂಬಂಧಮ್ ಅವರು, ಈ ಸ್ಪರ್ಧೆಯಲ್ಲಿ 70ಕ್ಕೂ ಹೆಚ್ಚು ದೇಶಗಳಿಂದ 1400 ಸ್ಪರ್ಧಿಗಳು ಭಾಗವಹಿಸಿದ್ದು, ಭಾರತವು 60 ಸ್ಪರ್ಧಿಗಳೊಂದಿಗೆ 52 ಕೌಶಲ್ಯಗಳಲ್ಲಿ ಸ್ಪರ್ಧಿಸಿತ್ತು. ಭಾರತ ತಂಡವು 3 ಕಂಚಿನ ಪದಕಗಳು ಮತ್ತು 12 ಮೆಡಾಲಿಯನ್‌ಗಳ ಪಡೆಯುವ ಮೂಲಕ ಸಾಧನೆ ಮಾಡಿದೆ ಎಂದರು.

ಅಡುಗೆ ವಿಭಾಗದಲ್ಲಿ ಮಂಗಳೂರು ಮೂಲದ ಹರ್ಷವರ್ಧನ್ ಭಾರತವನ್ನು ಪ್ರತಿನಿಧಿಸಿದ್ದು, ಈ ವಿಭಾಗದಲ್ಲಿ 43 ದೇಶ ಗಳ ತಲಾ ಒಬ್ಬರಂತೆ 43 ಸ್ಪರ್ಧಿಗಳು ಭಾಗವಹಿಸಿದ್ದರು. ಹರ್ಷವರ್ಧನ್ ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಮೂಲಕ ಭಾರತವು ಮೊದಲ ಬಾರಿಗೆ ಅಡುಗೆ ಕೌಶಲ್ಯದಲ್ಲಿ ಈ ಗೌರವವನ್ನು ಪಡೆದಿದೆ ಎಂದು ಅವರು ತಿಳಿಸಿದರು.

ವಿದ್ಯಾರ್ಥಿ ಹರ್ಷವರ್ಧನ್ ಮಾತನಾಡಿ, ಈ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡುವುದು ಬಹಳ ದೊಡ್ಡ ಸವಾಲಿನ ಕೆಲಸ ಆಗಿತ್ತು. ಅದಕ್ಕಾಗಿ ನನ್ನ ತರಬೇತುದಾರರಾದ ಕೆ.ತಿರು ಅವರು ಸಾಕಷ್ಟು ಮಾರ್ಗದರ್ಶನ ಮಾಡಿದ್ದರು. ಅದೇ ರೀತಿ ಕಾಲೇಜಿನ ಇತರ ಬಾಣಸಿಗರು ಕೂಡ ನನಗೆ ತುಂಬಾ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

Font Awesome Icons

Leave a Reply

Your email address will not be published. Required fields are marked *