ಸೆ.30 ರಂದು ಅಮರ್ ಪ್ರೀತ್ ಸಿಂಗ್ ವಾಯುಪಡೆಯ ಮುಖ್ಯಸ್ಥರಾಗಿ ನೇಮಕ

ನವದೆಹಲಿ: ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್‌ ಅವರು ಸೆಪ್ಟೆಂಬರ್ 30 ರಂದು ವಾಯುಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

5,000 ಗಂಟೆಗಳ ಯುದ್ಧ ವಿಮಾನ ಹಾರಾಟದ ಅನುಭವ ಹೊಂದಿರುವ ಅಮರ್ ಪ್ರೀತ್ ಸಿಂಗ್ ಪ್ರಸ್ತುತ ವಾಯುಪಡೆಯ ವೈಸ್ ಚೀಫ್ ಆಫ್ ದಿ ಏರ್ ಸ್ಟಾಫ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಏರ್ ಚೀಫ್ ಮಾರ್ಷಲ್ ವಿ.ಆರ್ ಚೌಧರಿ ನಿವೃತ್ತರಾದ ನಂತರ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಇತ್ತೀಚೆಗೆ ಐಎಎಫ್ ಆಯೋಜಿಸಿದ್ದ ಬಹುರಾಷ್ಟ್ರೀಯ ಯುದ್ಧ ವಿಮಾನಗಳ ಕಸರತ್ತು `ತರಂಗ್ ಶಕ್ತಿ’ ಆಯೋಜಿಸುವಲ್ಲಿ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಅಕ್ಟೋಬರ್ 27, 1964 ರಂದು ಜನಿಸಿದ ಏರ್ ಮಾರ್ಷಲ್ ಸಿಂಗ್ ಅವರು ಡಿಸೆಂಬರ್ 1984 ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಪೈಲಟ್ ಸ್ಟ್ರೀಮ್‍ಗೆ ನಿಯೋಜಿಸಲ್ಪಟ್ಟರು.

ಸುಮಾರು 40 ವರ್ಷಗಳ ಕಾಲ ಅವರ ಸುದೀರ್ಘ ಮತ್ತು ವಿಶಿಷ್ಟ ಸೇವೆಯಲ್ಲಿ, ವಿವಿಧ ಕಮಾಂಡ್, ಮತ್ತು ವಿದೇಶಿ ನೇಮಕಾತಿಯಲ್ಲೂ ಸೇವೆ ಸಲ್ಲಿಸಿದ್ದಾರೆ. ಸಿಂಗ್ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ ಮತ್ತು ನ್ಯಾಷನಲ್ ಡಿಫೆನ್ಸ್ ಕಾಲೇಜ್‍ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ.

ಪರೀಕ್ಷಾ ಪೈಲಟ್ ಆಗಿ, ಮಾಸ್ಕೋದಲ್ಲಿ ಮಿಗ್-29 ಅಪ್‍ಗ್ರೇಡ್ ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ತಂಡವನ್ನು ಮುನ್ನಡೆಸಿದ್ದರು. ಅಲ್ಲದೇ ರಾಷ್ಟ್ರೀಯ ವಿಮಾನ ಪರೀಕ್ಷಾ ಕೇಂದ್ರದಲ್ಲಿ ಯೋಜನಾ ನಿರ್ದೇಶಕರಾಗಿದ್ದರು ಮತ್ತು ಲಘು ಯುದ್ಧ ವಿಮಾನ ತೇಜಸ್‍ನ ಹಾರಾಟ ಪರೀಕ್ಷೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಏರ್ ಮಾರ್ಷಲ್ ಪರಮ ವಿಶಿಷ್ಟ ಸೇವಾ ಪದಕ ಮತ್ತು ಅತಿ ವಿಶಿಷ್ಟ ಸೇವಾ ಪದಕವನ್ನು ಪಡೆದಿದ್ದಾರೆ.

Font Awesome Icons

Leave a Reply

Your email address will not be published. Required fields are marked *