ಸಿಎಂ ಯಾರಾಗಬೇಕೆಂದು ಕಾಂಗ್ರೆಸ್ ನಲ್ಲಿ ಚರ್ಚೆ: ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಸೂಕ್ತ –ಆರ್.ಅಶೋಕ್ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು, ಸೆಪ್ಟೆಂಬರ್‌ 26,2024 (www.justkannada.in):  ಈಗ ಮುಖ್ಯಮಂತ್ರಿ ಯಾರಾಗಬೇಕೆಂದು ಕಾಂಗ್ರೆಸ್‌ ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ರಾಜೀನಾಮೆ ನೀಡದಿದ್ದರೆ ಪಕ್ಷದಲ್ಲಿ ಅನೇಕರು ದಂಗೆ ಏಳಲಿದ್ದಾರೆ. ಹೀಗಾಗಿ ಅವರು ರಾಜೀನಾಮೆ ನೀಡುವುದು ಸೂಕ್ತ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದರು.

ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಆರ್.ಅಶೋಕ್, ಹೈಕೋರ್ಟ್‌ನಿಂದ ತೀರ್ಪು ಬಂದ ನಂತರವೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿಲ್ಲ. ಬಿ.ಎಸ್‌.ಯಡಿಯೂರಪ್ಪನವರ ಮೇಲೆ ಆರೋಪ ಬಂದಾಗ ಇವರೇ ರಾಜೀನಾಮೆಗೆ ಒತ್ತಾಯಿಸಿದ್ದರು. ತನಿಖೆಗೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದೂ ಹೇಳಿದ್ದರು. ಹಾಗೆಯೇ ಈಗ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಿದೆ. ಕೆ.ಎಸ್‌.ಈಶ್ವರಪ್ಪ ಅವರ ಮೇಲೆ ಆರೋಪ ಬಂದಾಗಲೂ ಇದೇ ರೀತಿ ವಿಧಾನಸಭೆಯಲ್ಲಿ ಪ್ರತಿಭಟಿಸಿದ್ದರು. ಸಚಿವರಾಗಿದ್ದ ಬಿ.ನಾಗೇಂದ್ರ ಮೇಲೆ ಆರೋಪ ಬಂದು ಅವರು ರಾಜೀನಾಮೆ ನೀಡಿದ್ದಾರೆ. ಆದರೆ ಸಿಎಂ ಮಾತ್ರ ರಾಜೀನಾಮೆ ನೀಡುತ್ತಿಲ್ಲ ಎಂದರು.

ವಾಲ್ಮೀಕಿ ನಿಗಮದ ಪರಿಶಿಷ್ಟ ಪಂಗಡದವರ ಹಣ ದುರ್ಬಳಕೆಯಾಗಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಅಭಿವೃದ್ಧಿಗೆ ಕಾಸಿಲ್ಲ, ಆದರೆ ಲೂಟಿಗೆ ಮಾತ್ರ ಹಣ ದೊರೆಯುತ್ತಿದೆ. ಸಂತೋಷ್‌ ಹೆಗ್ಡೆಯವರು ಈ ಹಿಂದೆ ಯಡಿಯೂರಪ್ಪನವರ ರಾಜೀನಾಮೆ ಕೇಳಿದ್ದರು. ಈಗ ಸಿದ್ದರಾಮಯ್ಯನವರ ರಾಜೀನಾಮೆ ಕೇಳಿದ್ದಾರೆ. ಹಿರಿಯ ರಾಜಕಾರಣಿ ಕೆ.ಬಿ.ಕೋಳಿವಾಡ ಕೂಡ ರಾಜೀನಾಮೆ ನೀಡುವುದು ಸೂಕ್ತ ಎಂದಿದ್ದಾರೆ. ಈ ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ ಕೊಡಿ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ನಲ್ಲಿ ಸಿಎಂ ಆಗಲು ಅನೇಕರು ಕಾಯುತ್ತಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡದಿದ್ದರೆ ಅವರೆಲ್ಲರೂ ದಂಗೆ ಏಳಲಿದ್ದಾರೆ. ಸಂಸತ್ತಿನಲ್ಲಿ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಂವಿಧಾನದ ಪುಸ್ತಕ ಹಿಡಿದು ಓಡಾಡಿದ್ದಾರೆ. ಅವರೆಲ್ಲರೂ ಈಗ ಮೌನಕ್ಕೆ ಜಾರಿದ್ದಾರೆ. ದೇಶವನ್ನು 50 ವರ್ಷಗಳ ಕಾಲ ಕಾಂಗ್ರೆಸ್‌ ಲೂಟಿ ಮಾಡಿದೆ. ಕ್ಲೀನ್‌ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಕ್ಲೀನ್‌ ಆಗಲಿ ಎಂದರು.

ಬೇರೆ ದಾರಿ ಇಲ್ಲ

ಸ್ವಜನಪಕ್ಷಪಾತ ಆಗಿರುವುದು ನಿಜ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಇನ್ನು ಯಾವುದೇ ಕೋರ್ಟ್‌ಗೆ ಹೋದರೂ ಅದೇ ವಾದವನ್ನು ಮಂಡಿಸಬೇಕಿದೆ. ಹೀಗಾಗಿ ರಾಜೀನಾಮೆ ಬಿಟ್ಟು ಬೇರೆ ದಾರಿ ಇಲ್ಲ. ರಾಜ್ಯದ ಜನರು ನನ್ನ ಜೊತೆಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದು, ಅದನ್ನು ಮೊದಲು ಸಾಬೀತುಪಡಿಸಲಿ. ಚುನಾವಣೆ ನಡೆಸಿ ಎಷ್ಟು ಬೆಂಬಲ ಇದೆ ಎಂದು ತೋರಿಸಲಿ. ವಿಧಾನಸಭೆಯನ್ನು ವಿಸರ್ಜನೆ ಮಾಡಿ ಚುನಾವಣೆ ಎದುರಿಸಲಿ ಎಂದು ಸವಾಲೆಸೆದರು.

ಇದು ರಾಜಕೀಯ ಪ್ರೇರಿತವಾಗಿದ್ದರೆ ಕೋರ್ಟ್‌ ಗಳು ಏಕೆ ತೀರ್ಪು ನೀಡುತ್ತಿದ್ದವು? ಈ ರೀತಿ ಕಾಂಗ್ರೆಸ್‌ ಆರೋಪ ಮಾಡುವುದು ಒಂದು ರೀತಿ ದೊಂಬರಾಟವಾಗಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಮೊದಲಿಂದಲೂ ಸಮಸ್ಯೆ ಇದೆ. ಅನೇಕ ಬಾರಿ ಭಿನ್ನಮತ ಉಂಟಾಗಿದೆ. ಯಾರು ಸಿಎಂ ಆಗಬೇಕೆಂಬ ಚರ್ಚೆ ಕೂಡ ಕಾಂಗ್ರೆಸ್‌ ನೊಳಗೆ ನಡೆಯುತ್ತಿದೆ. ಈ ಸಮಯದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಸೂಕ್ತ ಎಂದರು.

Key words: Congress, CM, Siddaramaiah, resign, R. Ashok

Font Awesome Icons

Leave a Reply

Your email address will not be published. Required fields are marked *