ಅರಮನೆ ಅಂಗಳದಲ್ಲಿ “ಮಿನಿ ದಸರ” ನಡುವೆ ‘ಮೆಗ್ನಿಫಿಸೆಂಟ್ ಮೈಸೂರು’ ಬಿಡುಗಡೆ ಮಾಡಿದ ಸಿಎಂ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


 

ಮೈಸೂರು, ಸೆ.27,2024: (www.justkannada.in news) ಜಿಲ್ಲೆಯ ಪ್ರವಾಸಿ ತಾಣಗಳು, ಉತ್ಪನ್ನಗಳು, ಆಹಾರ – ತಿನಿಸುಗಳು ಸೇರಿದಂತೆ ಜಿಲ್ಲೆ ವಿಶೇಷಗಳ ಮಾಹಿತಿ ನೀಡುವ  ಪ್ರವಾಸಿ ಮಾರ್ಗದರ್ಶಿ  ‘ಮೆಗ್ನಿಫಿಸೆಂಟ್ ಮೈಸೂರು’ ಕಿರು ಹೊತ್ತಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಅರಮನೆ ಆವರಣದಲ್ಲಿ ಆಯೋಜಿಸಿದ್ದ  ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ ಕಿರುಹೊತ್ತಿಗೆ ಬಿಡುಗಡೆ ಮಾಡಿದರು.

ಅಂಬಾವಿಲಾಸ ಅರಮನೆ, ಮೃಗಾಲಯ, ಚಾಮುಂಡೇಶ್ವರಿ ದೇವಾಲಯ, ಬೃಂದಾವನ, ಫಿಲೊಮಿನಾ ಚರ್ಚ್, ಸೋಮನಾಥಪುರ ಚನ್ನಕೇಶವ ದೇಗುಲ, ರೈಲ್ವೆ ವಸ್ತು ಸಂಗ್ರಹಾಲಯ, ಕಬಿನಿ ಹಿನ್ನೀರು ಅರಣ್ಯ ಸಫಾರಿ, ಬೈಲುಕುಪ್ಪೆ, ಚುಂಚನಕಟ್ಟೆ ಜಲಪಾತ, ನಂಜನಗೂಡು ಶ್ರೀಕಂಠೇಶ್ವರ ದೇವಾಲಯ, ಗೊಮ್ಮಟಗಿರಿ ಸ್ಥಳಗಳ ಮಾಹಿತಿಯು ಈ ಹೊತ್ತಿಗೆಯಲ್ಲಿದೆ.

ಅಲ್ಲದೇ ಮೈಸೂರು ಇನ್‌ಲೇ ಕಲೆ, ಮೈಸೂರು ಪಾಕ್, ಮೈಸೂರು ಸಿಲ್ಕ್‌  ಸೀರೆ, ಮೈಸೂರು ಸಾಂಪ್ರದಾಯಿಕ ಪೇಂಟಿಂಗ್, ಮೈಸೂರು ಮಲ್ಲಿಗೆ, ಹನುಮಂತು ಪಲಾವ್ ಸೇರಿದಂತೆ ಇನ್ನು  ಕೆಲವು ವಿಶಿಷ್ಠಗಳ ಛಾಯಾಚಿತ್ರಗಳನ್ನು  ಈ ಹೊತ್ತಿಗೆ ಒಳಗೊಂಡಿದೆ.

ಮಿನಿ ದಸರಾ :

ನಾಡಹಬ್ಬ ದಸರೆಗೆ ದಿನಗಣನೆ ಆರಂಭಗೊಂಡ ಬೆನ್ನಲ್ಲೇ ಅರಮನೆ ಅಂಗಳ  ಇಂದು “ಮಿನಿ ದಸರೆ “ಗೆ ಸಾಕ್ಷಿಯಾಯಿತು. ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತದ  ಆಯೋಜಿಸಿದ್ದ  ಸಮಾರಂಭ ಇದಕ್ಕೆ ಕಾರಣವಾಗಿತ್ತು.

ಜಾನಪದ ಕಲಾತಂಡಗಳು,ಕಲಾವಿದರ ತಂಡಗಳು, ವಿದ್ಯಾಾರ್ಥಿಗಳು ದಿವಾನರ ಧಿರುಸನ್ನು  ಧರಿಸಿ ಪಥ ಸಂಚಲನ ನಡೆಸಿದ್ದು ಈ ಎಲ್ಲವೂ ದಸರೆಯ ಜಂಬೂಸವಾರಿ ನೆನಪಿಸುವಂತಿತ್ತು. ಇದಕ್ಕೆ ಇಂಬು ಕೊಡುವಂತೆ ಜಂಬೂಸವಾರಿಯಲ್ಲಿ ಭಾಗವಹಿಸಲು ಬಂದಿರುವ ಗಜಪಡೆಗಳು ಸಹ ಪ್ರವಾಸೋದ್ಯಮದ ದಿನದಲ್ಲಿ ಭಾಗವಹಿಸಿದ್ದು ಬಹಳ ವಿಶೇಷವಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸೋದ್ಯಮ ಇಲಾಖೆ ಬಾವುಟ ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬಳಿಕ ಇಲಾಖೆಯ ಹ್ಯಾಂಡ್‌ಬಿಲ್ ಮತ್ತು ಮೈಸೂರು ಪ್ರವಾಸೋದ್ಯಮ ಇಲಾಖೆ  ನೂತನ ವೆಬ್‌ಸೈಟ್  ಕಾರ್ಯಾರಂಭಕ್ಕೆ ಹಸಿರು ನಿಶಾನೆ ತೋರಿ ನಂತರ  ಬಿಳಿಬಣ್ಣದ ಬಲೂನ್‌ಗಳನ್ನು ಹಾರಿಬಿಟ್ಟರು.

ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ, ಕಳೆದ ಕೆಲದಿನಗಳಿಂದ ಪ್ರವಾಸೋದ್ಯಮ ದಿನಾಚರಣೆ ಸಲುವಾಗಿ ರೂಪುರೇಷೆ ಸಿದ್ಧಪಡಿಸಿ ಕಾರ್ಯಕ್ರಮ ಸಂಘಟಿಸಿದ್ದು ಯಶ ಕಂಡಿದ್ದು ಮೆಚ್ಚುಗೆಗೆ ಪಾತ್ರವಾಯಿತು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ರೇಷ್ಮೆ ಸಚಿವ ಕೆ.ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ, ಡಿ.ರವಿಶಂಕರ್, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ಡಾ.ತಿಮ್ಮಯ್ಯ, ಯತೀಂದ್ರ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಸಿಎಫ್ ಮಾಲತಿ ಪ್ರಿಯಾ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ, ಉಪ ನಿರ್ದೇಶಕ ರಾಜೇಂದ್ರ, ಸಹಾಯಕ ನಿರ್ದೇಶಕ ಪ್ರಭುಸ್ವಾಮಿ,ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ, ಆರ್‌ಎಫ್‌ಒ ಸಂತೋಷ್ ಹೂಗಾರ್ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಟಿ.ಎ.ನಾರಾಯಣಗೌಡ  ಮತ್ತಿತರರು ಹಾಜರಿದ್ದರು.

key words: CM, releases ‘Magnificent Mysore’, ‘Mini Dasara’ ,Mysore palace, world tourism day

Font Awesome Icons

Leave a Reply

Your email address will not be published. Required fields are marked *