ಆಗ್ರಾ: ಶಾಲಾ ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಬಳಸಿ ಆಕೆಯನ್ನು ಬ್ಲಾಕ್ ಮೇಲ್ ಮಾಡಿದ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದಡಿ ನಾಲ್ವರು ವಿದ್ಯಾರ್ಥಿಗಳನ್ನು ಆಗ್ರಾ ಪೊಲೀಸರು ಬಂಧಿಸಿದ್ದಾರೆ. ಆಗ್ರಾ ನಿವಾಸಿಯಾಗಿರುವ ಶಿಕ್ಷಕಿ ಮಥುರಾದ ಶಾಲೆಯಲ್ಲಿ ಪಾಠ ಮಾಡುತ್ತಾರೆ. ಅಲ್ಲದೆ ಕಲಿಕೆಯಲ್ಲಿ ಹಿಂದಿರುವ 10ನೇ ತರಗತಿ ವಿದ್ಯಾರ್ಥಿಗಳಿಗೆ ಅವರು ಆಗ್ರಾದಲ್ಲಿ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ.
ವಿದ್ಯಾರ್ಥಿಯೊಬ್ಬ ಕಾಲಕ್ರಮೇಣ ಆಕೆಗೆ ಹತ್ತಿರವಾಗಿದ್ದ. ತನ್ನ ಮೊಬೈಲ್ ಫೋನ್ ನಿಂದ ಶಿಕ್ಷಕಿಯ ಅಶ್ಲೀಲ ವೀಡಿಯೊವನ್ನು ಮಾಡಿದ್ದಾನೆ. ಅಲ್ಲದೆ ನಂತರ ತನ್ನೊಂದಿಗೆ ಶಾರೀರಿಕ ಸಂಬಂಧ ಬೆಳೆಸುವಂತೆ ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಕ್ಷಕಿ ಆತನಿಂದ ಅಂತರ ಕಾಯ್ದುಕೊಂಡ ಕಾರಣದಿಂದ ಅವನು ವಿಡಿಯೋವನ್ನು ಆತನ ಗ್ರಾಮದ ಮೂವರು ವಿದ್ಯಾರ್ಥಿಗಳಿಗೆ ಹಂಚಿದ್ದಾನೆ.
ವಿದ್ಯಾರ್ಥಿಗಳು ವಾಟ್ಸಾಪ್ ನಲ್ಲಿ ಇನ್ನೂ ಹಲವರಿಗೆ ವಿಡಿಯೋ ಕಳುಹಿಸಿದ್ದಾರೆ. ಅಲ್ಲದೆ ಇನ್ಸ್ಟಾಗ್ರಾಮ್ ನಲ್ಲಿ ಪೇಜ್ ಕೂಡಾ ಆರಂಭಿಸಿದ್ದಾರೆ. ಇದರಿಂದ ನೊಂದ ಶಿಕ್ಷಕಿಯು ಮಿಶನ್ ಶಕ್ತಿ ಅಭಿಯಾನ್ ಕೇಂದ್ರಕ್ಕೆ ತೆರಳಿ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಕೇಂದ್ರದಲ್ಲಿ ಆಕೆಯನ್ನು ಸಂತೈಸಿದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.