ಉಡುಪಿ: ಉಡುಪಿ ಜಿಲ್ಲೆಯಲ್ಲಿ ನವರಾತ್ರಿ ಉತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಇದೀಗ ಹಬ್ಬದ ಮೆರುಗು ಮನೆ ಮನೆಗಳಲ್ಲೂ ಕಾಣಬಹುದಾಗಿದೆ. ಮೈಸೂರು ಭಾಗಗಳಲ್ಲಿ ಹೆಚ್ಚು ಜನಜನಿತವಾಗಿರುವ ನವರಾತ್ರಿ ಗೊಂಬೆಗಳ ಪೂಜೆ ಉಡುಪಿಯಲ್ಲೂ ಕಂಡು ಬರುತ್ತಿದೆ.
ನಾನಾ ಬಗೆಯ ಗೊಂಬೆಗಳು ನವರಾತ್ರಿ ಹಬ್ಬದ ಮೆರುಗನ್ನು ಹೆಚ್ಚಿಸುತ್ತಿವೆ. ಉಡುಪಿಯ ರವೀಂದ್ರ ಅವರ ಮನೆಯಲ್ಲಿ ಮೈಸೂರಿನ ದಸರಾ ಬೊಂಬೆಗಳ ಜೋಡಣೆ ಮಾಡಲಾಗಿದೆ. ಇದು, ಅವರು ವಾಸ್ತವ್ಯ ಇರುವ ಅಪಾರ್ಟ್ ಮೆಂಟ್ ಮಾತ್ರವಲ್ಲ, ಉಡುಪಿ ಪರಿಸರದಲ್ಲೂ ನವರಾತ್ರಿ ಹಬ್ಬಕ್ಕೆ ಮೆರುಗನ್ನು ನೀಡುತ್ತಿದೆ. ಕಲಾತ್ಮಕವಾಗಿ ಈ ಗೊಂಬೆಗಳನ್ನು ಜೋಡಿಸುವುದೇ ಒಂದು ಅದ್ಭುತ ಕಲೆ. ವರ್ಷವಿಡೀ ಊರೂರು ಸುತ್ತಿ ಸಂಗ್ರಹಿಸಿದ ಅಪರೂಪದ ಗೊಂಬೆಗಳನ್ನು ಒಂದೇ ವೇದಿಕೆಯಲ್ಲಿ ಕಾಣುವುದೇ ಕಣ್ಣಿಗೆ ಹಬ್ಬ.
ರವೀಂದ್ರ ಅವರ ಪತ್ನಿ ಶುಭಾ ಕಳೆದ 8 ವರ್ಷಗಳಿಂದ ದಸರಾ ಗೊಂಬೆಗಳನ್ನಿಡುವ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಈ ಮೂಲಕ ಕರಾವಳಿಗೂ ಮೈಸೂರು ದಸರಾದ ಮೆರುಗು ನೀಡಿದ್ದಾರೆ. ಮನೆಯಲ್ಲಿ ಪ್ರತಿದಿನ ಪೂಜಾ ವಿಧಿವಿಧಾನಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪುತ್ರ ರಕ್ಷಿತ್ ಹಾಗೂ ಸೊಸೆ ಲಕ್ಷ್ಮೀ ಜೊತೆ ಸೇರಿ ಈ ಬಾರಿ ಹೊಸ ಗೊಂಬೆಗಳನ್ನು ತಂದು ವಿಶೇಷ ರೀತಿಯಲ್ಲಿ ಗೊಂಬೆಗಳನ್ನು ಇರಿಸಿದ್ದಾರೆ. ಇದು ಎಲ್ಲರ ಗಮನ ಸೆಳೆಯುತ್ತಿದೆ.