ಪಣಜಿ: ಅಕ್ರಮವಾಗಿ ಗೋವಾ ಸಮುದ್ರ ಗಡಿಯನ್ನು ಪ್ರವೇಶಿಸಿ ಬುಲ್ ಟ್ರಾಲಿಂಗ್ ಮಾಡುತ್ತಿದ್ದ ಆರೋಪದ ಮೇಲೆ ಉಡುಪಿ ಜಿಲ್ಲೆಯ ಮಲ್ಪೆಯಿಂದ ಸಮುದ್ರಕ್ಕಿಳಿದು ಮೀನುಗಾರಿಕೆ ನಡೆಸುತ್ತಿದ್ದ 2 ಬೋಟ್ ಗಳನ್ನು ಗೋವಾ ಸರ್ಕಾರ ವಶಪಡಿಸಿಕೊಂಡಿದೆ.
ಅಕ್ಟೋಬರ್ 5ರ ಬೆಳಗ್ಗೆ ಈ ಘಟನೆ ನಡೆದಿದ್ದು, ಅಕ್ರಮವಾಗಿ ಪ್ರವೇಶಿಸಿದ ಕಾರಣ, ಬೋಟ್ ಗಳನ್ನು ವಶಪಡಿಸಿಕೊಂಡು, ಈ ಬೋಟ್ ಗಳಲ್ಲಿದ್ದ ಮೀನುಗಳನ್ನು ಹರಾಜು ಹಾಕಲು ಮುಂದಾಗಿದೆ. ಅಲ್ಲದೇ ಬೋಟ್ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಗೋವಾ ರಾಜ್ಯ ಮೀನುಗಾರಿಕಾ ಇಲಾಖೆ ಮುಂದಾಗಿದೆ.
ಕಳೆದ ಹಲವು ದಿನಗಳಿಂದ ಇದೇ ರೀತಿ ಅಕ್ರಮವಾಗಿ ಗೋವಾ ಕಡಲ ಗಡಿ ನುಗ್ಗಿ ಮೀನುಗಾರಿಕೆ ನಡೆಸಲಾಗುತ್ತಿದೆ ಎಂದು ಗೋವಾದ ಮೀನುಗಾರರು ದೂರು ನೀಡಿದ್ದರು. ಹೀಗಾಗಿ ಈ ಬಗ್ಗೆ ಗೋವಾ ರಾಜ್ಯ ಮೀನುಗಾರಿಕಾ ಸಚಿವ ನೀಲಕಂಠ ಹಳರ್ಣಕರ್ ಕರ್ನಾಟಕ ಮೀನುಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಕೂಡ ನಡೆಸಿದ್ದರು. ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಕೂಡ ಬೋಟ್ ಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರು.