ಅದರ ಮಹತ್ವ ಹಾಗೂ ಪೂಜಾ ವಿಧಿ ಇಲ್ಲಿದೆ – ನ್ಯೂಸ್ ಕರ್ನಾಟಕ ಕನ್ನಡ (News Karnataka Kannada)

ಭಾರತದಾದ್ಯಂತ ಸಾಂಪ್ರದಾಯಿಕವಾಗಿ ಆಚರಿಸಲ್ಪಡುವ ಒಂಭತ್ತು ದಿನಗಳ ಹಬ್ಬವೇ ನವರಾತ್ರಿ. ಈ ಹಬ್ಬವನ್ನು ಪ್ರಮುಖವಾಗಿ ಒಂಭತ್ತು ದಿನಗಳು ಹಾಗೂ ಕೊನೆಯ ದಿನವನ್ನು ವಿಜಯದಶಮಿಯಾಗಿ ಆಚರಿಸಲಾಗುತ್ತದೆ. ನವರಾತ್ರಿಯ ಒಂಭತ್ತೂ ದಿನಗಳಲ್ಲಿ ಜಗತ್ತನ್ನು ದುಷ್ಟರಿಂದ ರಕ್ಷಿಸಲು ನವ ಅವತಾರಗಳನ್ನು ತಾಳಿ ದುರ್ಗಾದೇವಿಯು ಅಸುರರನ್ನು ಸಂಹರಿಸದಳೆಂದು ಹೇಳಲಾಗುತ್ತದೆ.

ನವರಾತ್ರಿಯ ಒಂಭತ್ತನೇ ದಿನದಂದು ಅಂದರೆ ನವಮಿಯಂದು ಆಚರಿಸಲ್ಪಡುವ ಹಬ್ಬವೇ ಮಹಾನವಮಿ. ಮಹಾನವಮಿಯಂದು ಮುಖ್ಯವಾಗಿ ಆಯುಧ ಪೂಜೆಗೆ ಮಹತ್ವವನ್ನು ನೀಡಲಾಗುತ್ತದೆ. ಕೆಲವೆಡೆ ವಿಜಯದಶಮಿಯಂದೂ ಆಯುಧ ಪೂಜೆ ಆಚರಿಸಲ್ಪಡುತ್ತದೆ. ಈ ದಿನ ಅಡುಗೆ ಮನೆಯಲ್ಲಿ ತರಕಾರಿ ಕತ್ತರಿಸುವ ಚಾಕುವಿನಿಂದ ಹಿಡಿದು, ದೇಶದ ಗಡಿ ಕಾಯುವ ಅತ್ಯಾಧುನಿಕ ಯುದ್ಧ ವಿಮಾನಗಳಿಗೂ ಆಯುಧ ಪೂಜೆಯನ್ನು ಮಾಡಲಾಗುತ್ತದೆ.

ಹಿಂದೂ ಸಂಸ್ಕೃತಿಯ ಪ್ರಕಾರ ಯಂತ್ರಗಳಿಗೂ ದೈವೀಕ ಶಕ್ತಿ ಇದೆ, ಇದರಿಂದಾಗಿ ಆಯುಧ ಪೂಜೆಯಂದು ವಾಹನಗಳಿಗೆ ಪೂಜೆ ಸಲ್ಲಿಸಿದರೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ. ಈ ದಿನ ರಾಜರು, ಸಾಮಂತರು, ಸರದಾರರು ತಮ್ಮತಮ್ಮ ಶಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ಮಾಡುತ್ತಾರೆ. ಗ್ರಾಮೀಣ ಪ್ರದೇಶದಲ್ಲೂ ಆಯುಧ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದ್ದು, ರೈತರು ತಮ್ಮ ಕೃಷಿ ಸಾಮಾಗ್ರಿಗಳಿಗೆ ಪೂಜೆಯನ್ನು ಮಾಡುತ್ತಾರೆ.
ನೂತನವಾಗಿ ವಾಹನವನ್ನು ಕೊಳ್ಳುವವರೂ ಕೂಡಾ ಹೆಚ್ಚಾಗಿ ಆಯುಧ ಪೂಜೆಯಂದೇ ತಮ್ಮ ಕಾರು, ಬೈಕ್‌, ಇತರ ವಾಹನಗಳಿಗೂ ಪೂಜೆ ಸಲ್ಲಿಸಿ ತಮ್ಮ ಮೊದಲ ಪ್ರಯಾಣವನ್ನು ಆರಂಭಿಸುತ್ತಾರೆ. ಇದರಿಂದಾಗಿ ವಾಹನಗಳು ದೀರ್ಘ ಬಾಳಿಕೆ ಬರುವುದಲ್ಲದೇ, ಅಪಘಾತವನ್ನೂ ತಪ್ಪಿಸಬಹುದು ಎನ್ನಲಾಗುತ್ತದೆ.

ಆಯುಧ ಪೂಜೆಯ ಮಹತ್ವ
ಅಶ್ವಿನೀ ಮಾಸದ ಶುಕ್ಲಪಕ್ಷದ ನವಮೀ ದಿನ ಶಸ್ತ್ರಾಸ್ತ್ರ, ಹಯ, ಗಜ, ವಾಹನ ಹಾಗೂ ಯಂತ್ರಗಳ ಪೂಜೆಯನ್ನು ಮಾಡಬೇಕು ಎನ್ನಲಾಗುತ್ತದೆ. ಪೌರಾಣಿಕ ಹಿನ್ನೆಲೆಯ ಪ್ರಕಾರ ದುರ್ಗೆಯು ಚಾಮುಂಡಿಯ ಅವತಾರವನ್ನು ತಾಳಿ ದುಷ್ಟನಾದ ಮಹಿಷಾಸುರನನ್ನು ಸಂಹರಿಸುತ್ತಾಳೆ. ಮಹಿಷನನ್ನು ಸಂಹರಿಸಲು ದೇವಿ ಉಪಯೋಗಿಸಿದ ಆಯುಧಗಳನ್ನು ಆಕೆ ಮತ್ತೆ ಬಳಸದೇ ಭೂಲೋಕದಲ್ಲಿ ಎಸೆದು ಹೋಗುತ್ತಾಳೆ. ನಂತರ ದೇವಿ ಎಸೆದ ಆಯುಧಗಳನ್ನು ಮನುಷ್ಯರು ತಂದು ಪೂಜಿಸಲು ಆರಂಭಿಸಿದರು ಇದೇ ಮುಂದೆ ಆಯುಧ ಪೂಜೆಯಾಗಿ ಆಚರಣೆಗೆ ಬಂತು ಎನ್ನಲಾಗುತ್ತದೆ.

ದ್ವಾಪರ ಯುಗದಲ್ಲಿ ಪಾಂಡವರು 12 ವರ್ಷ ವನವಾಸ ಹಾಗೂ ಒಂದು ವರ್ಷ ಅಜ್ಞಾತವಾಸ ಮುಗಿಸಿ ಬಂದ ದಿನವೇ ವಿಜಯದಶಮಿ ಎನ್ನಲಾಗುತ್ತದೆ. ಅಜ್ಞಾತವಾಸದ ಸಮಯದಲ್ಲಿ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನೀ ಮರದಲ್ಲಿ ಬಚ್ಚಿಟ್ಟಿರುತ್ತಾರೆ. ಅಜ್ಞಾತವಾಸ ಕಳೆದ ವಿಜಯದಶಮಿಯಂದು ಬನ್ನೀ ಮರದಲ್ಲಿ ಬಚ್ಚಿಟ್ಟಿದ್ದ ಆಯುಧಗಳನ್ನು ತೆಗೆದು ಪೂಜಿಸಿ, ನಂತರ ವಿರಾಟರಾಜನ ಶತ್ರುಗಳಾದ ಕೌರವರ ಮೇಲೆ ವಿಜಯವನ್ನು ಸಾಧಿಸಿದರು ಎಂಬ ನಂಬಿಕೆ ಇದೆ.

ದುರ್ಗಾ ದೇವಿಯು ಅರುಣೋದಯ ಕಾಲದಲ್ಲಿ ಶಂಭಾಸುರ, ರಕ್ತಬಬೀಜಾಸುರನನ್ನು ಸಂಹರಿಸಿದಳು ಆದ್ದರಿಂದ ಉದಯದಿಂದ ಆರು ಘಳಿಗೆ ಅಷ್ಟಮೀಯುಕ್ತವಾಗಿದ್ದಲ್ಲಿ ಅದು ಮಹಾನವಮಿ ಎಂದೆನಿಸುತ್ತದೆ. ಆಶ್ವಿನಿ ಮಾಸದ ಶುಕ್ಲ ನವಮಿಯು ರಾತ್ರಿಯವರೆಗೂ ವ್ಯಾಪಿಸಿದ್ದರೆ ಅದು ಕುದುರೆ, ಆನೆ, ಶಸ್ತ್ರಾಸ್ತ್ರಗಳ ಪೂಜೆಗೆ ಯೋಗ್ಯ ಘಳಿಗೆ ಎನ್ನಲಾಗುತ್ತದೆ.

Font Awesome Icons

Leave a Reply

Your email address will not be published. Required fields are marked *