ಸುಳ್ಳು ವಿಚಾರಗಳ ಆಧರಿಸಿಯೇ ಬಿಜೆಪಿ ಹೋರಾಟ: ತಾಯಿ ಚಾಮುಂಡೇಶ್ವರಿಯ ಕೃಪೆ ನನ್ನ ಮೇಲೆ ಸದಾ ಇರಲಿದೆ- ಸಿಎಂ ಸಿದ್ದರಾಮಯ್ಯ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು, ಅಕ್ಟೋಬರ್ 11,2024 (www.justkannada.in):  ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡುವ ಸೌಭಾಗ್ಯವನ್ನು ರಾಜ್ಯದ ಜನ ಹಲವು ಬಾರಿ ಒದಗಿಸಿಕೊಟ್ಟಿದ್ದಾರೆ. ತಾಯಿಯ ಆಶೀರ್ವಾದ ನನ್ನ ಮೇಲೆ ಸದಾ ಇರುವ ಕಾರಣದಿಂದಲೇ ದೀರ್ಘಕಾಲದಿಂದ ರಾಜಕೀಯದಲ್ಲಿ ಇರಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ಜನತೆಗೆ ದಸರೆಯ ಶುಭ ಕೋರಿದರು. ನಾಳೆ ಮೈಸೂರಿನಲ್ಲಿ ನಡೆಯುವ ಜಂಬೂಸವಾರಿ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ರಾಜಕೀಯದಲ್ಲಿ ತೆಗಳುವವರು, ಹೊಗಳುವವರು ಇರುತ್ತಾರೆ. ಶತ್ರುಗಳೂ , ಅಭಿಮಾನಿಗಳೂ ಇರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ನನ್ನನ್ನು ಸಹಮತಿಸಲೇ ಬೇಕೆಂಬ ಭಾವನೆ ನನಗಿಲ್ಲ. ಒಟ್ಟಾರೆ ಪ್ರಜಾಪ್ರಭುತ್ವದಲ್ಲಿ ಆರೋಗ್ಯಕರ ಚರ್ಚೆ, ಟೀಕೆಗಳು  ನಡೆದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದರು.

ದಸರಾ ಉತ್ಸವದ ಬಗ್ಗೆ ಪತ್ರಿಕೆಗಳಲ್ಲಿ ವತಿಯಿಂದ ಪ್ರಕಟವಾದ ಸರ್ಕಾರದ ಜಾಹಿರಾತಿನ ಬಗ್ಗೆ  ತಮ್ಮ ಅಭಿಪ್ರಾಯ ನೀಡುತ್ತಾ, ದುಷ್ಟರಿಗೆ ಶಿಕ್ಷೆ, ಶಿಷ್ಟರ ರಕ್ಷೆಯನ್ನು ದಸರೆಯ ಪ್ರತೀಕ. ವಿಜಯನಗರ ಅರಸರ ಜಯದ ಸಂಕೇತವಾಗಿ ಪ್ರಾರಂಭಿಸಲಾದ ಆಯುಧಪೂಜೆ ದಸರಾ ಉತ್ಸವವನ್ನು ಮೈಸೂರು ಒಡೆಯರ್ ರವರು ಮುಂದುವರೆಸಿದ್ದು, ಇಂದಿಗೂ ಆ ಪರಂಪರೆಯನ್ನು ಪಾಲಿಸಲಾಗುತ್ತಿದೆ ಎಂದರು.

ದುಷ್ಟರ ಸಂಹಾರ ಆಗಬೇಕಿದೆ ಎಂದು ಜಾಹಿರಾತಿನ ಬಗ್ಗೆ ವ್ಯಂಗ್ಯವಾಡಿದ ಸಂಸದೆ ಶೋಭಾ ಕರಂದ್ಲಾಜೆಯವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ  ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಸಂಸದೀಯ ಮಂಡಳಿಯ ಸದಸ್ಯತ್ವದಿಂದ ತೆಗೆದುಹಾಕಲು ಚಿಂತಿಸುವ ಬದಲು ಈ ರೀತಿ ಸುಳ್ಳು ಮಾತನಾಡುವುದು ತಪ್ಪು. ಕೋರ್ಟ್ ನ ಕೃಪೆಯಿಂದಾಗಿ ಅವರು ಜೈಲುಪಾಲಾಗದೆ ಹೊರಗಿದ್ದಾರೆ ಎಂದರು.

ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೋರಾಟ ಹಮ್ಮಿಕೊಳ್ಳುತ್ತಿರುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಸರ್ಕಾರಕ್ಕೆ ಕೆಲವು ಮೊಕದ್ದಮೆಗಳ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಸಚಿವಸಂಪುಟದ ಉಪಸಮಿತಿಗಿರುತ್ತದೆ. ಗೃಹಸಚಿವರು ಈ ಉಪಸಮಿತಿಯ  ನೇತೃತ್ವ ವಹಿಸಿದ್ದು, ಸಮಿತಿಯ ವಿವೇಚನೆಯಂತೆ ಪ್ರಕರಣದ ದೂರನ್ನು ಹಿಂದಕ್ಕೆ ಪಡೆದಿದೆ. ಆದಾಗ್ಯೂ ಈ ವಿಚಾರವಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತೇನೆ ಎಂದರು. ಬಿಜೆಪಿಯವರು ಕೇವಲ ಸುಳ್ಳು ವಿಚಾರಗಳ ಆಧರಿಸಿಯೇ ಹೋರಾಟ ಮಾಡುತ್ತಾರೆ. ಸತ್ಯದ ಪರವಾಗಿ ಅವರ ಹೋರಾಟ ಎಂದಿಗೂ ಕಾಣಸಿಗುವುದಿಲ್ಲ ಎಂದರು.

Key words: BJP, fight, based , false ideas, CM Siddaramaiah, mysore

Font Awesome Icons

Leave a Reply

Your email address will not be published. Required fields are marked *