ಸ್ನೇಹಮಯಿ ಕೃಷ್ಣ ಒಬ್ಬ ಬ್ಲ್ಯಾಕ್‌ ಮೇಲರ್: ಬಿಜೆಪಿಗೂ ಲೋಕಾಯುಕ್ತಕ್ಕೂ ರಾಯಭಾರಿಯಂತೆ ಕೆಲಸ- ಎಂ.ಲಕ್ಷ್ಮಣ್ ವಾಗ್ದಾಳಿ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್





ಮೈಸೂರು,ಅಕ್ಟೋಬರ್,15,2024 (www.justkannada.in): ಸ್ನೇಹಮಯಿ ಕೃಷ್ಣ ಒಬ್ಬ ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿ. ಒಬ್ಬ ಬ್ಲ್ಯಾಕ್ ಮೇಲರ್. ಬಿಜೆಪಿಗೂ ಲೋಕಾಯುಕ್ತಕ್ಕೂ ರಾಯಭಾರಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಸ್ನೇಹಮಯಿ ಕೃಷ್ಣ ಒಬ್ಬ ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿ. ಇವನ ವಿರುದ್ಧ 43 ಪ್ರಕರಣಗಳು ದಾಖಲಾಗಿವೆ. ಸಿಎಂ ಸಿದ್ದರಾಮಯ್ಯರನ್ನು ಬಂಧಿಸಿ ವಿಚಾರಣೆ ನಡೆಸುವಂತೆ ಆಗ್ರಹಿಸುತ್ತಾನೆ. ಪ್ರತಿನಿತ್ಯ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ವಿರುದ್ಧ ಒತ್ತಡ ಹೇರುತ್ತಿದ್ದಾನೆ. ಬಿಜೆಪಿ ನಾಯಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾನೆ. ಬಿಜೆಪಿಗೂ ಲೋಕಾಯುಕ್ತಕ್ಕೂ ರಾಯಭಾರಿಯಂತೆ ಕೆಲಸ ಮಾಡುತ್ತಿದ್ದಾನೆ ಎಂದು ಏಕವಚನದಲ್ಲೇ ಕಿಡಿಕಾರಿದರು.

ಅಲ್ಲದೆ  ಲಕ್ಷ್ಮಣ್ ಪ್ರತಿನಿತ್ಯ ಲೋಕಾಯುಕ್ತಗೆ ಹೋಗುತ್ತಿದ್ದಾರೆಂದು ಆರೋಪಿಸುತ್ತಾನೆ. ಆದರೆ ನಾನು ಒಮ್ಮೆ ಮಾತ್ರ ಹೋಗಿದ್ದೇನೆ. ಲೋಕಾಯುಕ್ತ ಕಚೇರಿ ಪಕ್ಕದಲ್ಲಿರುವ ಹೋಟೆಲ್ ಗೆ ಕಾಫಿ ಕುಡಿಯಲು ಪ್ರತಿನಿತ್ಯ ಹೋಗುತ್ತೇನೆ. ಸ್ನೇಹಮಯಿಕೃಷ್ಣ ಒಬ್ಬ ಬ್ಲಾಕ್‌ ಮೇಲರ್. ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ. ಮಾಧ್ಯಮಗಳ ಮುಂದೆ ಸುಳ್ಳುಹೇಳಿಕೆಗಳನ್ನು ನೀಡಿ ಪ್ರಚಾರ ಪಡೆಯುವ ಕೆಲಸವನ್ನು ಮಾಡುತ್ತಿದ್ದಾನೆ. ಪ್ರಕರಣ ತನಿಖೆಯ ಹಂತದಲ್ಲಿರುವಾಗ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾನೆ. ಸ್ನೇಹಮಯಿ ಕೃಷ್ಣ ಕೇಂದ್ರ ಸರ್ಕಾರದ ಸೂತ್ರಧಾರರಂತೆ ವರ್ತಿಸುತ್ತಿದ್ದಾನೆ. ಮೊದಲು ಆತನನ್ನು ಲೋಕಾಯುಕ್ತ ಪೋಲಿಸರು ಬಂಧಿಸಬೇಕು ಎಂದು ಹರಿಹಾಯ್ದರು.

ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ಮೇಲಿ‌ನ ಪ್ರಕರಣ ರಾಜ್ಯ ಸರ್ಕಾರದಿಂದ ರದ್ದತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್,  ಮುಸ್ಲಿಂ ಸಮುದಾಯದವರ ಹೆಸರು ಇರುವುದಕ್ಕೆ ಬಿಜೆಪಿಯವರು ಟೀಕಿಸುತ್ತಾರೆ. ಮುಸ್ಲಿಮರ ಹೆಸರು ಕೇಳಿದರೆ ಬಿಜೆಪಿಯರಿಗೆ ಉರಿ. ಮುಸ್ಲಿಮರನ್ನು ಭಯೋತ್ಪಾದಕರಿಗೆ ಹೋಲಿಸುತ್ತಿದ್ದಾರೆ. ಆದರೆ ಬಿಜೆಪಿ ಹಾಗೂ ಆರ್ ಎಸ್ ಎಸ್ ನವರು ನಿಜವಾದ ಭಯೋತ್ಪಾದಕರು. ರಾಜ್ಯ ಸರ್ಕಾರ 43 ಪ್ರಕರಣಗಳನ್ನು ಕೈ ಬಿಟ್ಟಿದೆ. ಅದರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಗೆ ಸಂಬಂಧಿಸಿದ 9 ಪ್ರಕರಣಗಳಿವೆ. ಉಳಿದ 34 ಪ್ರಕರಣಗಳು ಬಿಜೆಪಿ ಸರ್ಕಾರದ ಅವಧಿಗೆ ಸೇರಿವೆ. ರೈತ ಮುಖಂಡರು, ಕನ್ನಡಪರ ಹೋರಾಟಗಾರರಿಗೆ ಸಂಬಂಧಿಸಿದ ಪ್ರಕರಣಗಳಾಗಿವೆ. ಹುಬ್ಬಳ್ಳಿ ಪ್ರಕರಣದಲ್ಲಿ ಮುಸ್ಲಿಮರ ಹೆಸರು ಇರುವುದರಿಂದ ಬಿಜೆಪಿಗರು ದೊಡ್ಡದು ಮಾಡುತ್ತಿದ್ದಾರೆ ಎಂದು ಎಂ.ಲಕ್ಷ್ಮಣ್ ಗುಡುಗಿದರು.

Key words: Snehamayi Krishna, black mailer, M. Laxman, mysore






Previous articleಅ. 20ರಂದು ಮೈಸೂರಿನಲ್ಲಿ ಸ್ವರ ಸಂಭ್ರಮ


Font Awesome Icons

Leave a Reply

Your email address will not be published. Required fields are marked *