ರಕ್ಷಣಾ ಸಚಿವಾಲಯ ಸಲಹಾ ಸಮಿತಿ ಸದಸ್ಯರಾಗಿ ದ.ಕ. ಸಂಸದ ಕ್ಯಾ. ಬ್ರಿಜೇಶ್‌ ಚೌಟ ನೇಮಕ

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ರಕ್ಷಣಾ ಸಚಿವಾಲಯದ ಸಲಹಾ ಸಮಿತಿಗೆ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಕೇಂದ್ರ ರಕ್ಷಣಾ ಸಚಿವರಾದ ರಾಜ್‌ನಾಥ್ ಸಿಂಗ್ ಹಾಗೂ ರಕ್ಷಣಾ ಖಾತೆ ರಾಜ್ಯ ಸಚಿವರಾದ ಸಂಜಯ್ ಸೇಠ್ ಅವರ ಅಧ್ಯಕ್ಷತೆಯ ಈ ಸಲಹಾ ಸಮಿತಿಯಲ್ಲಿ ಲೋಕಸಭೆಯ ಒಟ್ಟು 14 ಹಾಗೂ ರಾಜ್ಯಸಭೆಯ 6 ಮತ್ತು ಇಬ್ಬರು ಪದನಿಮಿತ್ತ ಸದಸ್ಯರು ಇದ್ದಾರೆ. ಲೋಕಸಭೆಯಿಂದ ಆಯ್ಕೆಯಾದ ಸದಸ್ಯರ ಪೈಕಿ ದಕ್ಷಿಣ ಕನ್ನಡ ಸಂಸದ ಕ್ಯಾ. ಚೌಟ ಕೂಡಾ ಒಬ್ಬರು.

ರಕ್ಷಣಾ ಸಚಿವಾಲಯದ ಈ ಸಲಹಾ ಸಮಿತಿಯೂ ಸರ್ಕಾರದ ರಕ್ಷಣಾ ನೀತಿಗಳು, ವಿವಿಧ ಯೋಜನೆ-ಕಾರ್ಯಕ್ರಮಗಳ ಅನುಷ್ಠಾನದ ವಿಧಾನ ಹಾಗೂ ದೇಶದ ರಕ್ಷಣೆಗೆ ಸಂಬಂಧಿಸಿದ ವಿಚಾರಗಳ ಕುರಿತಂತೆ ಆಗಾಗ ಸಭೆ ನಡೆಸಿ ಸೂಕ್ತ ಸಲಹೆ ನೀಡಲಿದೆ. ಒಟ್ಟಾರೆ ನಮ್ಮ ರಾಷ್ಟ್ರದ ಭದ್ರತೆಯನ್ನು ಬಲಪಡಿಸುವ ರಕ್ಷಣಾ ನೀತಿಗಳ ರಚನೆ ಮತ್ತು ಅನುಷ್ಠಾನಕ್ಕೆ ಸೂಕ್ತ ಮಾರ್ಗದರ್ಶನ ಕೊಡಲಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ಕ್ಯಾ. ಚೌಟ “ನಮ್ಮ ರಾಷ್ಟ್ರ ಮತ್ತು ರಕ್ಷಣಾ ಕ್ಷೇತ್ರವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಸ್ವಾವಲಂಬಿಯಾಗುವತ್ತ ದಾಪುಗಾಲು ಹಾಕುತ್ತಿರುವ ಸಮಯದಲ್ಲಿ ರಕ್ಷಣಾ ಸಚಿವಾಲಯದ ಸಲಹಾ ಸಮಿತಿಗೆ ಸದಸ್ಯನಾಗಿ ನೇಮಕಗೊಂಡಿರುವುದು ನನಗೆ ಗೌರವದ ವಿಚಾರವಾಗಿದೆ. ಒಬ್ಬ ಯೋಧನಾಗಿ, ಸಂಸತ್ತಿನ ಸದಸ್ಯನಾಗಿ ದೇಶದ ರಕ್ಷಣಾ ಕ್ಷೇತ್ರಕ್ಕೆ ಸೇವೆ ಸಲ್ಲಿಸಲು ಈ ಅವಕಾಶ ಸಿಕ್ಕಿರುವುದು ನನ್ನ ಪಾಲಿನ ಸುಯೋಗ” ಎಂದು ಹೇಳಿದ್ದಾರೆ.

Font Awesome Icons

Leave a Reply

Your email address will not be published. Required fields are marked *